ಬೆಂಗಳೂರು,ಅ.17-ಮೊಣಕಾಲು ನೋವಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಹಲವು ದಿನಗಳಿಂದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದು, ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸದ್ಯ ವೈದ್ಯರು ಅವರ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸದ್ಯ ಬೊಮ್ಮಾಯಿ ಆರೋಗ್ಯವಾಗಿದ್ದು, ಅವರನ್ನು ವೈದ್ಯರು ನಾಳೆ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಕೆಲ ವರ್ಷಗಳಿಂದ ಬೊಮ್ಮಾಯಿಯವರು ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದರು. ನಡೆದಾಡುವಾಗ ಸಮಸ್ಯೆ ಎದುರಿಸುತ್ತಿದ್ದರು. ಆದರೂ ಸಹ ಅವರು ಕುಂಟುತ್ತಾ ರಾಜಕೀಯ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊನೆಗೆ ನೋವು ಹೆಚ್ಚಾಗಿದ್ದರಿಂದ ಅವರು ಸಿಎಂ ಸ್ಥಾನದಲ್ಲಿರವಾಗಲೇ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು.
ಬಿಹಾರದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಇಬ್ಬರು ಸಾವು
ಒಂದು ವೇಳೆ ಆಪರೇಷನ್ ಮಾಡಿಸಿಕೊಂಡರೇ ಹಲವು ದಿನಗಳ ವಿಶ್ರಾಂತಿ ಅಗತ್ಯವಿರುತ್ತದೆ ಎಂದು ಆಪರೇಷನ್ ಮಾಡಿಸಿಕೊಳ್ಳುವುದನ್ನು ಕೈಬಿಟ್ಟಿದ್ದರು. ಬದಲಿಗೆ ಬಸವರಾಜ ಬೊಮ್ಮಾಯಿ ಮಂಡಿ ನೋವಿಗೆ ಮೈಸೂರಿನ ಮೂಲದ ಖ್ಯಾತ ನಾಟಿ ವೈದ್ಯ ಲೋಕೇಶ್ ಟೇಕ್ ಅವರಿಂದ ಚಿಕಿತ್ಸೆ ಪಡೆದುಕೊಂಡಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸರ್ಕಾರದ ಚುಕ್ಕಾಣಿ ಹಿಡಿದ ವೇಳೆ ಮಂಡಿ ನೋವು ಉಲ್ಬಣಿಸಿತ್ತು. ಉಪಚುನಾವಣಾ ಪ್ರಚಾರದ ವೇಳೆ ವಿಶ್ರಾಂತಿ ರಹಿತ ಪ್ರವಾಸದ ಕಾರಣದಿಂದ ಮಂಡಿ ನೋವು ಮತ್ತಷ್ಟು ಹೆಚ್ಚಾಗಿ ಅಕ್ಷರಶಃ ಕುಂಟುತ್ತಾ ನಡೆಯುವಂತಾಗಿತ್ತು.
ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಷ್ಟು ಸಮಯವೂ ಮಂಡಿ ಚಿಕಿತ್ಸೆಗೆ ಮುಂದಾಗಿರಲಿಲ್ಲ. ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಹಲವು ದಿನಗಳ ವಿಶ್ರಾಂತಿ ಅಗತ್ಯವಿರುತ್ತದೆ ಎಂದು ಆಪರೇಷನ್ ಮಾಡಿಸಿಕೊಳ್ಳುವುದನ್ನು ಕೈಬಿಟ್ಟಿದ್ದರು. ಕುಂಟುತ್ತಲೇ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮಂಡಿ ಶಸ್ತ್ರಚಿಕಿತ್ಸೆ ಆಗಲೇಬೇಕು ಎಂದು ವೈದ್ಯರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜ ಬೊಮ್ಮಾಯಿ ಅವರು ಶೀಘ್ರಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಫೋಸ್ಟ್ ಮಾಡಿದ್ದಾರೆ.