Friday, April 25, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಮಲೆನಾಡ ಭಗೀರಥ ಎನಿಸಿಕೊಂಡಿದ್ದ ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ

ಮಲೆನಾಡ ಭಗೀರಥ ಎನಿಸಿಕೊಂಡಿದ್ದ ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ

Former Minister Begane Ramaiah passes away

ಚಿಕ್ಕಮಗಳೂರು, ಏ.25- ಮಾಜಿ ಸಚಿವರು ಹಾಗೂ ಹಿರಿಯ ಮುತ್ಸದ್ದಿಗಳಾಗಿದ್ದ ಬೇಗಾನೆ ರಾಮಯ್ಯ ಅವರು ನಿನ್ನೆ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮೃತರು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ತಂದೆಯಾಗಿದ್ದಾರೆ. ಬೇಗಾನೆ ರಾಮಯ್ಯ ಅವರ ಅಂತ್ಯ ಸಂಸ್ಕಾರವನ್ನು ಇಂದು ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯ ಸೀತಾಫಾರಂನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗ ತಿಳಿಸಿದೆ.

ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಸಕ್ರೀಯರಾಗಿದ್ದ ಬೇಗಾನೆ ರಾಮಯ್ಯ ಅವರು 1978ರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಧಾನಸೌಧದ ಮೆಟ್ಟಿಲೇರಿದರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಮಾರ್ಗದರ್ಶನ ಇವರನ್ನ ಪಕ್ವವಾಗಿಸುತ್ತದೆ. ಪಕ್ಷ ಸಂಘಟನೆ, ಜನಪರ ಕಾಳಜಿ ಹಾಗೂ ಕ್ರಿಯಾಶೀಲ ಮನೋಭಾವದಿಂದ ರಾಜಕೀಯದಲ್ಲಿ ಬೇಗನೆ ತಮ್ಮ ಛಾಪನ್ನು ಮೂಡಿಸಿದ ರಾಮಯ್ಯ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ಆ ನಂತರದಲ್ಲಿ ಅನೇಕ ಜನಪರ ಕಾರ್ಯಗಳ ಮೂಲಕ ಇಡೀ ರಾಜ್ಯಾದ್ಯಂತ ಜನರ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ. ಅದರಲ್ಲೂ ಮಲೆನಾಡು ಭಾಗಕ್ಕೆ ಕುಡಿಯುವ ನೀರು ತರುವಲ್ಲಿ ಇವರ ಶ್ರಮ ಹಾಗೂ ಕಾಳಜಿ ಅವಿಸ್ಮರಣೀಯ. ಅಂದು 250 ಮನೆಗಳಿದ್ದ ಗ್ರಾಮಗಳಲ್ಲಿ ಮಾತ್ರ ಬೋರ್ ವೆಲ್ ಕೊರೆಸಲು ಅನುಮತಿಯಿದ್ದ ಸರ್ಕಾರದ ನಿಯಮಕ್ಕೆ ತಿದ್ದುಪಡಿ ತಂದು ಆ ಮೂಲಕ ಮಲೆನಾಡಿನ ಭಾಗದಲ್ಲಿ ನೀರಿನ ಅಭಾವಕ್ಕೆ ಇತಿಶ್ರೀ ಹಾಡುತ್ತಾರೆ. ಹೀಗಾಗಿ ಇವರನ್ನ ಮಲೆನಾಡಿನ ಭಗೀರಥ, ಬೋರ್ ವೆಲ್ ರಾಮಯ್ಯ ಎಂದು ಜನ ಪ್ರೀತಿಯಿಂದ ಕೊಂಡಾಡುತ್ತಾರೆ.

ಅಧ್ಯಯನ ಶೀಲತೆ ಹಾಗೂ ವಿಚಾರ ಮಂಡನೆ ಚಾಕಚಕ್ಯತೆಯಿಂದಾಗಿಯೇ ಬೇಗಾನೆ ರಾಮಯ್ಯ ಅವರು ಅತ್ಯುತ್ತಮ ಸಂಸದೀಯ ಪಟು ಎಂದು ಗುರುತಿಸಲ್ಪಟ್ಟಿದ್ದರು. ಅಪಾರ ಭಾಷಾ ಜ್ಞಾನ ಹಾಗೂ ಇಂಗ್ಲೀಷ್ ಪ್ರಾವಿಣ್ಯತೆ ಬೇಗಾನೆ ರಾಮಯ್ಯ ಅವರಲ್ಲಿತ್ತು. ಈ ಕಾರಣಕ್ಕೆ ಅವರು ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ವರಿಷ್ಠರ ಒಡನಾಟ ಗಳಿಸುವ ಮೂಲಕ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾಷಣಗಳನ್ನ ಸುಲಭವಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಜನರಿಗೆ ಮನಮುಟ್ಟುವಂತೆ ತಲುಪಿಸುತ್ತಿದ್ದರು.

ಸ್ವಾರ್ಥ ಹಾಗೂ ಅಧಿಕಾರ ದಾಹದ ರಾಜಕಾರಣವನ್ನ ಯಾವತ್ತೂ ಮಾಡದೆ, ಜನಪರ ಚಿಂತನೆ, ಗ್ರಾಮೀಣಾಭಿವೃದ್ಧಿ, ನಿಸ್ವಾರ್ಥ ಸೇವೆಯ ಮೂಲಕ ಮಾದರಿ ವ್ಯಕ್ತಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಆದರ್ಶಗಳು ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳಿಗೆ ಪ್ರೇರಣೆಯಾಗಿವೆ.

RELATED ARTICLES

Latest News