ಬೆಂಗಳೂರು,ಮೇ18- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 92ನೇ ಹುಟ್ಟಹಬ್ಬದ ಅಂಗವಾಗಿ ಜೆಡಿಎಸ್ ಕಚೇರಿ ಜೆಪಿ ಭವನದ ಆವರಣದಲ್ಲಿ ಗೌಡರ ಪೋಸ್ಟರ್‌ಗೆ ಕ್ಷೀರಾಭಿಷೇಕ ಮಾಡಲಾಯಿತು. ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರ ನೇತೃತ್ವದಲ್ಲಿ ದೇವೇಗೌಡರ ಕಟೌಟ್‌ಗೆ ಅಭಿಷೇಕ ಮಾಡಿ ಶುಭ ಕೋರಲಾಯಿತು.
ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಕೇಕ್ ಕತ್ತರಿಸಿ ಹುಟ್ಟಹಬ್ಬ ಆಚರಿಸಿ ಪರಸ್ಪರ ಸಿಹಿ ಹಂಚಿ ಗೌಡರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶರವಣ, ದೇವೇಗೌಡರ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ್ದೇವೆ.
ದೇವೇಗೌಡರು ಬೇಸರದಲ್ಲಿರುವುದು ನಮಗೂ ಬೇಸರ ತಂದಿದೆ. ಕಳಂಕ ತರುವ ಪ್ರಯತ್ನ ಕೆಲವರಿಂದ ನಡೆಯುತ್ತಿದ್ದು, ಅವರಿಗೇ ತಿರುಗು ಬಾಣವಾಗಲಿದೆ. ಸತ್ಯಕ್ಕೆ ಜಯ ಸಿಗುತ್ತದೆ. ಈ ನೆಲದ ಕಾನೂನು ಮೇಲೆ ವಿಶ್ವಾಸವಿದೆ. ಭಗವಂತನ ಆಶೀರ್ವಾದದಿಂದ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ಅವರು ಹೇಳಿದರು.
ರಮೇಶ್‌ಗೌಡ ಮಾತನಾಡಿ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ತಲಾ ಒಂದೊಂದು ಕೇಕ್‌ಗಳನ್ನು ತಂದು ದೇವೇಗೌಡರ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಅಲ್ಲದೆ ದೇವೇಗೌಡರ ಜನದಿನದ ಅಂಗವಾಗಿ ಆಸ್ಪತ್ರೆಗಳಲ್ಲಿ ಹಣ್ಣುಗಳನ್ನು ಹಂಚಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರೇವಣ್ಣ, ಗೋಪಾಲ್, ಶೈಲಜಾ, ಕನ್ಯಾಕುಮಾರಿ ಮತ್ತಿತರರು ಉಪಸ್ಥಿತರಿದ್ದರು.