ನವದೆಹಲಿ,ಡಿ.27- ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಸಂದರ್ಭದಲ್ಲಿ ಸಿಂಗ್ ಅವರ ದಿಟ್ಟ ಆರ್ಥಿಕ ಸುಧಾರಣೆಗಳು ದೇಶದ ಆರ್ಥಿಕ ಮಾರ್ಗವನ್ನು ಪರಿವರ್ತಿಸಲು ಸಾಕಷ್ಟು ಕೆಲಸ ಮಾಡಿತು. ಅವರು ಆಗ ಕೈಗೊಂಡ ನಿರ್ಣಾಯಕ ಉದಾರೀಕರಣ ಕ್ರಮಗಳಿಂದ ದೇಶದ ಹಣಕಾಸು ಪರಿಸ್ಥಿತಿ ಸುಧಾರಣೆ ಕಂಡಿತು.
ಈ ವೇಳೆ ಅವರು ರೂಪಾಯಿ ಅಪಮೌಲ್ಯಗೊಳಿಸಿದರು, ತೆರಿಗೆ ಹೊರೆಗಳನ್ನು ಕಡಿಮೆ ಮಾಡಿದರು. ದೇಶವನ್ನು ಸರಿಯಾದ ಹಳಿಗೆ ತರಲು, ವಿದೇಶಿ ಹೂಡಿಕೆಯನ್ನು ಆಕರ್ಷಿಸಿದರು. ಈ ಮೂಲಕ ಭಾರತದ ಆರ್ಥಿಕತೆಯನ್ನು ಸ್ಥಿರಗೊಳಿಸಿದರು ಮತ್ತು ಭವಿಷ್ಯದ ಬೆಳವಣಿಗೆಗೆ ವೇದಿಕೆಯನ್ನು ಸಿದ್ಧಪಡಿಸಿದರು.
ಯುಪಿಎ ಸರ್ಕಾರದ ಮೊದಲ ಅವಧಿ:
2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಜಯಗಳಿಸಿದ ನಂತರ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದರು. ನಂತರ ಸಿಂಗ್ ಅವರ ನಾಯಕತ್ವದಲ್ಲಿ ಭಾರತವು ಗಮನಾರ್ಹ ಆರ್ಥಿಕ ಬೆಳವಣಿಗೆ ಕಂಡಿತು.
ಸಿಂಗ್ ಆಡಳಿತ ಅವಧಿಯಲ್ಲಿ ಭಾರತದ ಆಡಳಿತವು ಅಂತರ್ಗತ ಬೆಳವಣಿಗೆ ಕಂಡಿತು. ಬಡತನ ನಿರ್ಮೂಲನೆ ಮತ್ತು ಶಿಕ್ಷಣ, ಆಹಾರ ಭದ್ರತೆ ಮತ್ತು ಉದ್ಯೋಗದಂತಹ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಯೋಜನೆಗಳು ಭಾರತವು ಸದೃಢವಾಗಿ ಬೆಳವಣಿಗೆ ಕಾಣಲು ನೆರವಾಯಿತು. ಅವರ ನೀತಿಗಳು ಆರ್ಥಿಕ ವಿಸ್ತರಣೆ ಹಾಗೂ ಸುಧಾರಣೆಗೆ ದಾರಿ ಮಾಡಿಕೊಟ್ಟವು. ಇಂತಹ ಕ್ರಮಗಳಿಂದಾಗಿ ಲಕ್ಷಾಂತರ ಜನರು ಬಡತನದಿಂದ ಮುಕ್ತರಾದರು.
009 ರಲ್ಲಿ ಡಾ. ಸಿಂಗ್ ಮತ್ತೊಮೆ ಚುನಾಯಿತರಾದರು. ಆದಾಗ್ಯೂ, ಅವರ ಎರಡನೇ ಅವಧಿಯು ಪ್ರಕ್ಷುಬ್ಧತೆಯಿಂದ ತುಂಬಿತ್ತು ಎಂಬುದು ಗಮನಾರ್ಹ. ಏಕೆಂದರೆ ಹಣದುಬ್ಬರ, ಭ್ರಷ್ಟಾಚಾರ ಮತ್ತು ಆಡಳಿತದ ಅಸಮರ್ಥತೆಗಳ ಸುತ್ತಲಿನ ಟೀಕೆಗಳಿಂದಾಗಿ ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಈ ವಿವಾದಗಳ ಹೊರತಾಗಿಯೂ, ಅವರ ಸರ್ಕಾರವು ಆರ್ಥಿಕ ಮತ್ತು ಸಾಮಾಜಿಕ ನೀತಿಯಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿತ್ತು ಎಂದು ಆರ್ಥಿಕ ತಜ್ಞರು, ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮಹತ್ವದ ಸುಧಾರಣೆಗಳು:
ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವಾರು ಮಹತ್ವದ ಸುಧಾರಣೆಗಳು ಮತ್ತು ಉಪಕ್ರಮಗಳಿಂದ ದೇಶದ ಆರ್ಥಿಕತೆ ಅಭಿವೃದ್ಧಿ ಕಂಡಿದೆ.
ಸಿಂಗ್ ಸರ್ಕಾರವು ನಾಗರಿಕರಿಗೆ ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿ ಹಕ್ಕುಗಳನ್ನು ಖಾತರಿಪಡಿಸುವ ಐತಿಹಾಸಿಕ ಶಾಸನಗಳನ್ನು ಅಂಗೀಕರಿಸುವ ಮೂಲಕ ಭವ್ಯ ಭಾರತಕ್ಕೆ ಭದ್ರ ಅಡಿಪಾಯ ಹಾಕಿತು.
ಈ ಮೂಲಕ ಅವರ ನಾಯಕತ್ವವು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಆಟಗಾರನಾಗಿ ಭಾರತದ ಪಾತ್ರವನ್ನು ಗಟ್ಟಿಗೊಳಿಸಿತು, ಸುಧಾರಣೆಗಳೊಂದಿಗೆ ದೇಶವು ತ್ವರಿತ ಬೆಳವಣಿಗೆಯ ಹಂತವನ್ನು ತಲುಪಲು ರಾಜಮಾರ್ಗ ನಿರ್ಮಾಣ ಮಾಡಿದರು.ಸಿಂಗ್ ಅವರು ಆರ್ಥಿಕ ನೀತಿ ನಿರೂಪಣೆಗಾಗಿ ನೀಡಿದ ಕೊಡುಗೆಗಳನ್ನು ಗುರುತಿಸಿ 1987ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದವಿಭೂಷಣವನ್ನು ನೀಡಿ ಗೌರವಿಸಲಾಗಿದೆ.
ಆರ್ಥಿಕ ಸುಧಾರಣೆಗಳ ಆತ್ಮವಿಶ್ವಾಸದ ಸಮರ್ಥನೆ :
ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ ಅವರು 199ರ ಕೇಂದ್ರ ಬಜೆಟ್‌ಗೆ ಅಂಗೀಕಾರ ಪಡೆಯಲು ಭಾರಿ ಕಸರತ್ತನ್ನೇ ಮಾಡಬೇಕಾಯಿತು. ಅವರು ಅಂದು ತೆಗೆದುಕೊಂಡ ಹಾಗೂ ಎದುರಿಸಿದ ಸವಾಲುಗಳು ನೂರಾರು. ಅಕ್ಷರಶಃ ಪ್ರಯೋಗ ಮಾಡಿ, ಟೀಕೆಗಳ ಸರಮಾಲೆಯನ್ನು ಎದುರಿಸಿ ಗೆದ್ದು ಬೀಗಿದರು. ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದರು.
ಪಿ ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. ಆಗ ಅವರು ತಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಎದುರಿಸಿ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದರು. ಸುಧಾರಣೆಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು.
1991ರಲ್ಲಿ ಸಿಂಗ್ ಅವರ ಐತಿಹಾಸಿಕ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ರಕ್ಷಿಸಿದವು ಮಾತ್ರವಲ್ಲದೇ , ದೇಶದ ಆರ್ಥಿಕ ಅಭಿವೃದ್ಧಿಯ ಪಥವನ್ನು ಏರುತ್ತಿರುವ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸುವಂತೆ ಮಾಡಿದವು.
ಜುಲೈ 25, 1991ರಂದು ಕೇಂದ್ರ ಬಜೆಟ್ ಮಂಡನೆಯಾದ ಒಂದು ದಿನದ ನಂತರ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದರು. ತಮ ಬಜೆಟ್‌ನ ಸಂದೇಶವನ್ನು ಸಮರ್ಥವಾಗಿ ಪತ್ರಕರ್ತರೆದರು ಮಂಡಿಸಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ ಎಂಬ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. ನರಸಿಂಹ ರಾವ್ ಅವರು ಪ್ರಧಾನಿಯಾದ ನಂತರ ನಡೆದ ವೇಗದ ಬದಲಾವಣೆಗಳನ್ನು ತಮ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ.
ಪತ್ರಕರ್ತರ ಬೆಂಕಿಯಂತಹ ಪ್ರಶ್ನೆಗಳಿಗೂ ಉತ್ತರ: ಬಜೆಟ್ ಮಂಡನೆಯ ಒಂದು ದಿನದ ನಂತರ ಪತ್ರಕರ್ತರನ್ನು ಎದುರಿಸಿದ ಮನಮೋಹನ್ ಸಿಂಗ್, ತಮ ಬಜೆಟ್ ಬಗ್ಗೆ ಎಳೆ ಎಳೆಯಾಗಿ ದೇಶದ ಮುಂದಿಟ್ಟರು, ತಮ ನೀತಿ – ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಇದೊಂದು ಮಾನವೀಯ ಮುಖವುಳ್ಳ ಬಜೆಟ್‌ಎಂದು ಬಣ್ಣಿಸಿದರು.
ಅವರು ರಸಗೊಬ್ಬರ, ಪೆಟ್ರೋಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಿಸುವ ಪ್ರಸ್ತಾವನೆಗಳನ್ನು ಜೋಪಾನವಾಗಿ ಸಮರ್ಥಿಸಿಕೊಂಡರು ಎಂದು ಜೈರಾಂ ರಮೇಶ್ 2015ರಲ್ಲಿ ಪ್ರಕಟವಾದ ತಮ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಕಾಂಗ್ರೆಸ್ ಶ್ರೇಯಾಂಕಗಳಲ್ಲಿನ ಅಸಮಾಧಾನ ಗ್ರಹಿಸಿದ ಅಂದಿನ ಪ್ರಧಾನಿ ನರಸಿಂಹ ರಾವ್ ಅವರು ಆಗಸ್ಟ್ 1, 1991 ರಂದು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಕರೆದಿದ್ದರು. ಪಕ್ಷದ ಸಂಸದರು ತಮ ಮನದಾಳ, ಅಸಮಾಧಾನಗಳನ್ನು ಹೊರ ಹಾಕಲು ಮುಕ್ತ ಅವಕಾಶ ನೀಡಲು ನಿರ್ಧರಿಸಿದರು.
ಪ್ರಧಾನಿ ನರಸಿಂಹ ರಾವ್, ಮನಮೋಹನ್ ಸಿಂಗ್ ಅವರಿಗೆ ಉತ್ತರ ನೀಡಲು, ವಿರೋಧವನ್ನು ಎದುರಿಸಲು ಅವಕಾಶ ಮಾಡಿಕೊಟ್ಟರು ಅಂತಾರೆ ತಮ ಪುಸ್ತಕದಲ್ಲಿ ಜೈರಾಂ ರಮೇಶ್. ಆಗಸ್ಟ್ 2 ಮತ್ತು 3 ರಂದು ಮತ್ತೆ ಎರಡು ಸಭೆಗಳು ನಡೆದವು. ಆಗಲೂ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದೂ ಮನಮೋಹನ್ ಸಿಂಗ್ ಅವರೇ. ನರಸಿಂಹರಾವ್ ಎಲ್ಲವನ್ನು ಮೌನದಿಂದಲೇ ನೋಡುತ್ತಿದ್ದರು.
ಸಿಪಿಪಿ ಸಭೆಗಳಲ್ಲಿ ಹಣಕಾಸು ಸಚಿವರು ಒಬ್ಬಂಟಿಯಾಗಿದ್ದರು ಮತ್ತು ಅವರ ಸಂಕಷ್ಟವನ್ನು ನಿವಾರಿಸಲು ಪ್ರಧಾನಿ ಏನನ್ನೂ ಮಾಡಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಜೈರಾಂ ರಮೇಶ್. ಅಂದು ಸಭೆಯಲ್ಲಿ ಮನಮೋಹನ್ ಸಿಂಗ್ ಅವರ ನೆರವಿಗೆ ಬಂದಿದ್ದು, ಕೇವಲ ಇಬ್ಬರು ಸಂಸದರು ಒಬ್ಬರು ಮಣಿಶಂಕರ್ ಅಯ್ಯರ್ ಮತ್ತೊಬ್ಬರು ನಾಥುರಾಮ್ ಮಿರ್ಧಾ. ಈ ಇಬ್ಬರು ಸಂಸದರು ಮನಮೋಹನ್ ಸಿಂಗ್ ಅವರ ಬಜೆಟ್ ಅನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದರು.
ಅಯ್ಯರ್ ಮನಮೋಹನ್ ಸಿಂಗ್ ಅವರ ಬಜೆಟ್ ಅನ್ನು ಬೆಂಬಲಿಸಿದರು. ಇದು ಹಣಕಾಸಿನ ಬಿಕ್ಕಟ್ಟನ್ನು ತಡೆಯಲು ಏನು ಮಾಡಬೇಕೆಂಬುದರ ಬಗ್ಗೆ ರಾಜೀವ್ ಗಾಂಧಿಯವರ ನಂಬಿಕೆಗಳಿಗೆ ಅನುಗುಣವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಪಕ್ಷದ ಒತ್ತಡಕ್ಕೆ ಮಣಿದ ಸಿಂಗ್, ರಸಗೊಬ್ಬರ ಬೆಲೆಯಲ್ಲಿನ ಶೇಕಡಾ 40ರಷ್ಟು ಹೆಚ್ಚಳವನ್ನು ಶೇಕಡಾ 30ಕ್ಕೆ ಇಳಿಸಲು ಒಪ್ಪಿಕೊಂಡರು, ಆದರೆ ಎಲ್‌ಪಿಜಿ ಮತ್ತು ಪೆಟ್ರೋಲ್ ಬೆಲೆಗಳ ಏರಿಕೆಯನ್ನು ಅವರು ಕಡಿಮೆ ಮಾಡುವ ಗೋಜಿಗೆ ಹೋಗಲೇ ಇಲ್ಲ.
ಆಗಸ್ಟ್ 6ರಂದು ಲೋಕಸಭೆಯಲ್ಲಿ ಮನಮೋಹನ್ ಸಿಂಗ್ ನೀಡಲಿರುವ ಹೇಳಿಕೆಯನ್ನು ನಿರ್ಧರಿಸಲು ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಆಗಸ್ಟ್ 4 ಮತ್ತು 5, 1991ರಂದು ಎರಡು ಬಾರಿ ಸಭೆ ಸೇರಿ ಚರ್ಚಿಸಿತು. ಕಳೆದ ಕೆಲವು ದಿನಗಳಿಂದ ಇದ್ದ ರೋಲ್-ಬ್ಯಾಕ್ ಕಲ್ಪನೆಯ ಬೇಡಿಕೆಯನ್ನು ಕೈಬಿಟ್ಟಿತು, ಆದರೆ ಈಗ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಿತ್ತು ಎಂದು ಜೈರಾಂ ರಮೇಶ್ ತಮ ಪುಸ್ತಕದಲ್ಲಿ ಹೇಳಿದ್ದಾರೆ.