Thursday, May 29, 2025
Homeರಾಜ್ಯಬೆಂಗಳೂರು ನಗರ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ನಿಧನ

ಬೆಂಗಳೂರು ನಗರ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ನಿಧನ

Former President of Bangalore City Bar Association K.N. Puttegowda passes away

ಬೆಂಗಳೂರು, ಮೇ 28- ಬೆಂಗಳೂರು ನಗರ ವಕೀಲರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಅನೇಕ ಸಂಘ-ಸಂಸ್ಥೆಗಳ ಕಾನೂನು ಸಲಹೆಗಾರರಾಗಿ ಸರಳ-ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಕೆ.ಎನ್.ಪುಟ್ಟೇಗೌಡ ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಲವಾರು ಜ್ವಲಂತ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಸರ್ಕಾರ ಹಾಗೂ ಜನಸಾಮಾನ್ಯರಿಗೆ ಹತ್ತಿರವಾಗಿದ್ದ ಅವರು, ವಕಾಲತು ವಹಿಸುವ ಮೂಲಕ ನ್ಯಾಯ ಒದಗಿಸಿಕೊಟ್ಟಿದ್ದಾರೆ. ರಾಜ್ಯಾದ್ಯಂತ ಹಲವಾರು ಕಡೆ ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳಲ್ಲಿ ಸಾಕ್ಷಿ ಸಮೇತ ವಾದ ಮಂಡಿಸಿ ಉಳಿಸಿಕೊಟ್ಟ ಕೀರ್ತಿ ಪುಟ್ಟೇಗೌಡರಿಗೆ ಸಲ್ಲುತ್ತದೆ.

ಇವರ ಪಾರ್ಥಿವ ಶರೀರವನ್ನು ವಿಜಯನಗರದ 7ನೇ ಮುಖ್ಯ ರಸ್ತೆ, 2ನೆ ಅಡ್ಡ ರಸ್ತೆಯಲ್ಲಿರುವ ಅವರ ಮನೆ ಬಳಿ ಇಂದು ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಜೀವನದುದ್ದಕ್ಕೂ ಸೇವಾ ಗುಣ ಹೊಂದಿದ್ದ ಇವರು, ತಮ್ಮ ಕೊನೆ ಆಸೆಯಂತೆ ಇವರ ದೇಹವನ್ನು ಬಿಜಿಎಸ್ ಆಸ್ಪತ್ರೆಗೆ ದಾನ ಮಾಡಲಾಗುತ್ತಿದೆ.

ಇಂಥ ಮಹಾನ್ ವ್ಯಕ್ತಿತ್ವವುಳ್ಳ ಮಹಾನ್ ಚೇತನವನ್ನು ಕಳೆದುಕೊಂಡು ಇಡೀ ಕರ್ನಾಟಕ ವಕೀಲರ ಸಮುದಾಯಕ್ಕೆ, ಸಾರ್ವಜನಿಕ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿ ಬೆಂಗಳೂರು ವಕೀಲರ ಸಂಘ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ರಾಜ್ಯ ಒಕ್ಕಲಿಗರ ಸಂಘ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.

ಹಿರಿಯ ನ್ಯಾಯವಾದಿಗಳು, ಆತ್ಮೀಯರಾಗಿದ್ದ ಕೆ.ಎನ್ ಪುಟ್ಟೇಗೌಡ ಅವರು ಇಂದು ದೈವಾಧೀನರಾದ ವಿಷಯ ತಿಳಿದು ಮನಸ್ಸು ಭಾರವಾಗಿದೆ. ಶ್ರೀಯುತರ ಅತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಕುಟುಂಬಸ್ಥರು ಹಾಗೂ ಆಪ್ತವರ್ಗದವರಲ್ಲಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಶೋಕ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News