Thursday, December 5, 2024
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruತುಮಕೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ

ತುಮಕೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ

Foundation stone laid for construction of international cricket stadium in Tumkur

ತುಮಕೂರು,ಡಿ.2- ನಗರದಲ್ಲಿ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಶಂಕುಸ್ಥಾಪನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಡೇಟಿಯಂ ಭೂಮಿಯು ಮಂಜೂರಾಗಿರುವ ಆದೇಶ ಪತ್ರವನ್ನು ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಹಸ್ತಾಂತರಿಸಲಾಯಿತು.

ಬಳಿಕ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ, ಭಾರತೀಯ ಕ್ರಿಕೆಟ್ ಮಂಡಳಿಯವರಿಗೆ ಅಭಿನಂದನೆ ತಿಳಿಸಿದರು.ಸುಮಾರು ವರ್ಷಗಳಿಂದ ಕನಸಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ತರಬೇತಿಗೆ ಅಡಿಗಲ್ಲು ಹಾಕಲಾಗಿದೆ.

ಕೆಎಸ್ಸಿಎ ಎರಡು ವರ್ಷದಲ್ಲಿ ಸ್ಟೇಡಿಯಂ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದೆ ಎಂದು ಹೇಳಿದರು.ವಸಂತನರಸಾಪುರದಲ್ಲಿ 20 ಸಾವಿರ ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ನೀಡಲಾಗಿದೆ. ಏಷ್ಯದಲ್ಲಿ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ. ಫುಡ್ ಪಾರ್ಕಿಂಗ್ ಆರಂಭವಾಗಿದ್ದು, ಜಪಾನೀಸ್ ಟೌನ್ಷಿಪ್ ನಿರ್ಮಾಣಕ್ಕೆ 500 ಎಕರೆ ನೀಡಲಾಗಿದೆ ಎಂದು ತಿಳಿಸಿದರು.

ಈ ಭಾಗದ ಜನರು ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿಯನ್ನು ಕಳೆದುಕೊಂಡಿದ್ದು, ಅವರಿಗೆ ಉದ್ಯೋಗ ಸಿಗುವಂತಾಗಬೇಕು. ಸ್ಥಳೀಯರಿಗೆ ಹೆಚ್ಚಿನ ಒತ್ತು ನೀಡಬೇಕು. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.ಶಾಸಕ ಸುರೇಶ್ಗೌಡ ಈಗ ಶಾಂತಚಿತ್ತ ದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದ್ದಕ್ಕಿದ್ದಂತೆ ಒಮೊಮೆ ಗಲಾಟೆ ಮಾಡಿ ಬಿಡುತ್ತಾರೆ ಎಂದು ಅವರಿಗೆ ಕಿಚಾಯಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಎನ್.ರಾಜಣ್ಣ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜು, ಶಾಸಕರಾದ ಬಿ.ಸುರೇಶ್ಗೌಡ, ಜ್ಯೋತಿಗಣೇಶ್, ಸುರೇಶ್, ಶ್ರೀನಿವಾಸ್, ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಆರ್.ರಾಜೇಂದ್ರ, ಕೆಎಸ್ಸಿಎ ಅಧ್ಯಕ್ಷ ಎ.ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್, ಮಾಜಿ ಶಾಸಕ ಗೌರಿಶಂಕರ್, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ ಮುಂತಾದವರು ಇದ್ದರು.

RELATED ARTICLES

Latest News