ಹಾಸನ, ಜೂ.8- ರೌಡಿಶೀಟರ್, ಚೈಲ್ಡ್ ರವಿ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜಿತ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಹತ್ಯೆ ಪ್ರಕರಣ ಸಂಬಂಧ ಹಾಸನ ನಗರದ ಪ್ರೀತಮ್ (27), ಕೀರ್ತಿ( 26), ರಂಗನಾಥ್ (26), ಅಮಿತ್ (31) ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ರವಿ ಹಾಗೂ ಪ್ರೀತಂ ನಡುವೆ ಕ್ಷುಲ್ಲಕ ಕಾರಣಕ್ಕೆ ಪದೇಪದೇ ಮಾತಿನ ಚಕಮಕಿ ಹಾಗೂ ಗಲಾಟೆಗಳು ನಡೆದಿದ್ದು, ಕೊಲೆ ನಡೆಯುವ ದಿನವೂ ಸಹ ಚೈಲ್ಡ್ ರವಿಯೊಂದಿಗೆ ಪ್ರೀತಂ ಮೊಬೈಲ್ ಸಂಭಾಷಣೆ ವೇಳೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.
ಹತ್ಯೆ ಆರೋಪಿ ಪ್ರೀತಂ ವಿರುದ್ಧ ಈಗಾಗಲೇ ನಾಲ್ಕು ಕೊಲೆ ಪ್ರಕರಣ ದಾಖಲಾಗಿದ್ದು , ಹತ್ಯೆಗೀಡಾದ ರವಿ ವಿರುದ್ಧ ಕೊಲೆ ಸೇರಿದಂತೆ 304 , 307, 504ರ ಅಡಿ ಏಳು ಪ್ರಕರಣಗಳು ದಾಖಲಾಗಿದ್ದವು. ರವಿ ಹತ್ಯೆಯಾದ ನಂತರ ರವಿ ಪತ್ನಿ , ಪ್ರೀತಂ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು. ಈ ದೂರಿನ ಅನ್ವಯ ತನಿಖೆ ಕೈಗೊಂಡು ಮಾಹಿತಿ ಕಲೆ ಹಾಕುವ ಮೂಲಕ ಹಾಸನ ತಾಲೂಕಿನ ಗ್ಯಾರಹಳ್ಳಿ ಮಧ್ಯದ ಅಂಗಡಿ ಬಳಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಎಸ್ಪಿ ತಿಳಿಸಿದರು.
ರೌಡಿಸಂ ವಿರುದ್ಧ ಕಠಿಣ ಕ್ರಮ :
ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹಾಗೂ ರೌಡಿಸಂ ತಹಬದಿಗೆ ತರುವಲ್ಲಿ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ಚುನಾವಣೆ ಸಂದರ್ಭದಲ್ಲಿಯೂ 59 ಮಂದಿಯನ್ನು ಗಡಿಪಾರು ಮಾಡಲಾಗಿತ್ತು ಎಂದು ಎಸ್ಪಿ ವಿವರಿಸಿದರು.ಅಪರಾಧ ಪ್ರಕರಣವನ್ನು ತಡೆಯುವ ನಿಟ್ಟಿನಲ್ಲಿ ಗೊಂಡಾ ಕಾಯ್ದೆಯಡಿ 11 ಮಂದಿ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.
ಟ್ರಾಫಿಕ್ ಸಮಸ್ಯೆಗೆ ಶೀಘ್ರದಲ್ಲಿ ಕ್ರಮ:
ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿಯಾಡಲು ಇನ್ನೆರಡು ದಿನದಲ್ಲಿ ಪ್ರಮುಖವಾಗಿ ಬಿಎಮ್ ರಸ್ತೆ, ಎನ್.ಆರ್. ಸರ್ಕಲ್, ಸಾಲಿಗಾಮೆ ರಸ್ತೆ, ಸೇರಿದಂತೆ ಪ್ರಮುಖ ವೃತ್ತಗಳ ಅಂಗಡಿ ಮಾಲೀಕರ ಸಭೆಯನ್ನು ಕರೆಯಲಾಗುತ್ತಿದೆ ಎಂದರು.
ಈಗಾಗಲೇ ಶಾಲೆಗಳು ಆರಂಭವಾಗಿರುವುದರಿಂದ ಶಂಕರಮಠ ರಸ್ತೆ, ಕೆ.ಆರ್.ಪುರಂ ಸಂಪಿಗೆ ರಸ್ತೆ ಹಾಗೂ ಇತರೆ ಬಡಾವಣೆಗಳಲ್ಲಿನ ಆಸ್ಪತ್ರೆ ಮತ್ತು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರನ್ನು ಕರೆದು ಪಾರ್ಕಿಂಗ್ ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಹಾಗೂ ಪಾರ್ಕಿಂಗ್‌ಗೆ ಸೂಕ್ತ ಸ್ಥಳವನ್ನು ಗುರುತಿಸಲಾಗುವುದು ಎಂದರು.
ನಗರದಲ್ಲಿ ಮತ್ತೆ ವೀಲಿಂಗ್ ಹಾಗೂ ಕರ್ಕಶ ದ್ವನಿವುಳ್ಳ ಸೈಲೆನ್ಸರ್ ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು ಆಟೋ ಚಾಲಕರು ಸಹ ಗ್ರಾಹಕರೊಂದಿಗೆ ಅಂಚಿತವಾಗಿ ವರ್ತಿಸುತ್ತಿರುವುದು ಮತ್ತು ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದೆ.
ಆದ್ದರಿಂದ ಆಟೋ ಚಾಲಕರ ಮಾಲೀಕರ ಸಭೆ ಕರೆದು ಕಟ್ಟುನಿಟಿನ ಸೂಚನೆ ನೀಡಲಾಗುವುದು ಮತ್ತು ವೀಲಿಂಗ್ ಹಾಗೂ ಕರ್ಕಶ ಸೈಲೆನ್ಸರ್ ಬಳಸಿ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ಇಲಾಖೆಯಿಂದ ದಂಡ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದರು.