ಬೆಂಗಳೂರು, ನ.20- ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾರೆಂಬ ಆರೋಪದ ಮೇಲೆ ಪ್ರೊಬೇಶನರಿ ಪಿಎಸ್‍ಐ, ಕಾನ್‍ಸ್ಟೇಬಲ್ ಹಾಗೂ ಮಾಜಿ ಹೋಂಗಾರ್ಡ್ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹೋಂಗಾರ್ಡ್ ಎಂದು ಪರಿಚಿಸಿಕೊಂಡು ರಾಜ್ ಕಿಶೋರ್, ನಮ್ಮ ಅಣ್ಣನಿಗೆ ಕಾರ್ತಿಕ್ ಎಂಬಾತ ಹಣ ನೀಡಬೇಕು. ನೀವು ಕೊಡಿಸಿ ಎಂದು ಪ್ರೊಬೇಶನರಿ ಪಿಎಸ್‍ಐ ಅವರಿಗೆ ಹೇಳಿದ್ದಾನೆ. ಪ್ರೊಬೇಶನರಿ ಪಿಎಸ್‍ಐ ಅವರು ಕಾನ್‍ಸ್ಟೇಬಲ್ ಜೊತೆ ಸ್ಥಳಕ್ಕೆ ಹೋಗಿ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಕಾರ್ತಿಕ್‍ನನ್ನು ಎಚ್‍ಎಸ್‍ಆರ್ ಲೇಔಟ್‍ನಿಂದ ಅಪಹರಿಸಿ ಒಂದೂವರೆ ಕೋಟಿ ಕ್ರಿಫ್ಟೋ ಕರೆನ್ಸಿ ಹಾಗೂ 20 ಲಕ್ಷ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾರೆ.
ಕಾರ್ತಿಕ್ ಹೆದರಿ ಆರೋಪಿಗಳ ಅಕೌಂಟ್‍ಗೆ ಹಣ ವರ್ಗಾವಣೆ ಮಾಡಿದ್ದಾರೆ, ಘಟನೆ ಬಳಿಕ ಕಾರ್ತಿಕ್ ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆ ವಿವರಿಸಿ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಕೈಗೆತ್ತಿಕೊಂಡು ಮಾಹಿತಿಗಳನ್ನು ಸಂಗ್ರಹಿಸಿದಾಗ ಈ ಪ್ರಕರಣದಲ್ಲಿ ಪ್ರೊಬೇಶನರಿ ಪಿಎಸ್‍ಐ ಶಾಮೀಲಾಗಿರುವುದು ಗೊತ್ತಾಗಿದೆ.
ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ಪಿಎಸ್‍ಐ ಅಲ್ಲದೆ ಕಾನ್‍ಸ್ಟೇಬಲ್ ಹಾಗೂ ಮಾಜಿ ಹೋಂಗಾರ್ಡ್ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಆರೋಪಿಗಳ ಅಕೌಂಟ್‍ನಲ್ಲಿದ್ದ 24 ಲಕ್ಷ ಹಣ ಹಾಗೂ ಕ್ರಿಫ್ಟೋ ಹಣ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಸಿಸಿಬಿಯ ಡಿಸಿಪಿ ಶ್ರೀನಿವಾಸ್‍ಗೌಡ ಅವರು ಈ ಸಂಜೆಗೆ ತಿಳಿಸಿದ್ದಾರೆ.