Sunday, October 6, 2024
Homeರಾಜ್ಯಭೀಕರ ಕಾರು ಅಪಘಾತದಲ್ಲಿ ನಾಲ್ವರ ದುರ್ಮರಣ

ಭೀಕರ ಕಾರು ಅಪಘಾತದಲ್ಲಿ ನಾಲ್ವರ ದುರ್ಮರಣ

ಬಾಗಲಕೋಟೆ, ಸೆ.26- ಕ್ಯಾಂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ. ವಿಜಯಪುರ ಜಿಲ್ಲೆಯ ಬಿದರಕುಂದಿ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ವಡ್ಡರ್‌(55), ಬೈಲಪ್ಪ ಬಿರದಾರ್‌(45), ರಾಮಣ್ಣ ನಾಯಕ(50), ಚಾಲಕ ರಫಿಕ್‌ ಮುಲ್ಲಾ(25) ಮೃತಪಟ್ಟ ದುರ್ದೈವಿಗಳೆಂದು ತಿಳಿದುಬಂದಿದೆ.

ಮೃತರು ಹೊಸಪೇಟೆ ಬಳಿಯ ಹುಲಿಗೆಮ ದೇವಾಲಯಕ್ಕೆ ತೆರಳಿ ದರ್ಶನ ಮುಗಿಸಿಕೊಂಡು ತಡರಾತ್ರಿ 2 ಗಂಟೆ ಸುಮಾರಿನಲ್ಲಿ ವಾಪಸ್‌‍ ಬರುತ್ತಿದ್ದಾಗ ಮುದ್ದೆಬಿಹಾಳದಿಂದ ಹುನಗುಂದ ಕಡೆಗೆ ತೆರಳುತ್ತಿದ್ದ ಕ್ಯಾಂಟರ್‌ಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ತಡರಾತ್ರಿವರೆಗೂ ನಿರಂತರವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದು, ಒಂದು ಕ್ಷಣ ನಿದ್ದೆ ಮಂಪರಿಗೆ ಚಾಲಕ ಜಾರಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸುದ್ದಿ ತಿಳಿದ ಕೂಡಲೇ ಹುನಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News