Wednesday, September 3, 2025
Homeಬೆಂಗಳೂರುಬೆಂಗಳೂರಲ್ಲಿ ಸಂಭವಿಸಿದ ನಾಲ್ಕು ಪ್ರತ್ಯೇಕ ಅಪಘಾತ ಮತ್ತು ರೋಡ್ ರೇಜ್ ಪ್ರಕರಣಗಳಲ್ಲಿ ನಾಲ್ವರ ಸಾವು

ಬೆಂಗಳೂರಲ್ಲಿ ಸಂಭವಿಸಿದ ನಾಲ್ಕು ಪ್ರತ್ಯೇಕ ಅಪಘಾತ ಮತ್ತು ರೋಡ್ ರೇಜ್ ಪ್ರಕರಣಗಳಲ್ಲಿ ನಾಲ್ವರ ಸಾವು

Four people died in four separate accidents and road rage incidents in Bengaluru

ಬೈಕ್‌ಗೆ ಟಾಟಾಎಸ್‌‍ ವಾಹನ ಡಿಕ್ಕಿ : ಪೇಂಟರ್‌ ಸಾವು..
ಬೆಂಗಳೂರು,ಸೆ.3-ಮೂರು ವಾಹನಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಪೇಂಟರ್‌ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಜ್ಞಾನಭಾರತಿ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಮಿಳುನಾಡು ಮೂಲದ ಮನಿಗೊಂಡನ್‌ (45) ಮೃತಪಟ್ಟ ಪೇಂಟರ್‌.ಮೂಡಲಪಾಳ್ಯದಲ್ಲಿ ವಾಸವಿದ್ದ ಇವರು ಇಂದು ಬೆಳಗ್ಗೆ 10.15 ರ ಸುಮಾರಿನಲ್ಲಿ ಮತ್ತೊಬ್ಬ ಪೇಂಟರ್‌ ಲಿಂಗಪ್ಪನನ್ನು ತಮ ಬೈಕ್‌ನಲ್ಲಿ ಕರೆದುಕೊಂಡು ಕೆಲಸಕ್ಕೆ ಹೋಗುತ್ತಿದ್ದರು.

ದೊಡ್ಡಬಸ್ತಿ ಮುಖ್ಯ ರಸ್ತೆಯ ಸೊನ್ನೇನಹಳ್ಳಿ ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಬಿಎಂಟಿಸಿ ಬಸ್‌‍ ನಿಂತಿತ್ತು. ಹಾಗಾಗಿ ಇವರ ಬೈಕ್‌ ಬಸ್‌‍ ಹಿಂದೆ ನಿಂತಿದೆ. ಆ ವೇಳೆ ಅತೀ ವೇಗವಾಗಿ ಬಂದ ಟಾಟಾಎಸ್‌‍ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಾಗ ಆ ಬೈಕ್‌ ಬಿಎಂಟಿಸಿ ಬಸ್‌‍ಗೆ ಅಪ್ಪಳಿಸಿದೆ.

ಈ ಅಪಘಾತದಿಂದಾಗಿ ಬೈಕ್‌ ಸವಾರ ಮನಿಗೊಂಡನ್‌ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಲಿಂಗಪ್ಪ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿದು ಜ್ಞಾನಭಾರತಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಸವಾರರು, ಕಾರಿನಲ್ಲಿದ್ದವರ ಮಧ್ಯೆ ಜಗಳ : ವೃದ್ಧ ಸಾವು
ಕಾರಿಗೆ ಜಾಗ ಬಿಡಲಿಲ್ಲವೆಂಬ ಕೋಪಕ್ಕೆ ಬೈಕ್‌ ಸವಾರರು ಹಾಗೂ ಕಾರಿನಲ್ಲಿದ್ದವರ ಮಧ್ಯೆ ನಡೆದ ಜಗಳ, ತಳ್ಳಾಟ ನೂಕಾಟದಲ್ಲಿ ವೃದ್ದರೊಬ್ಬರು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಆರ್‌ಟಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಕೌಸಲ್‌ ನಗರದ ನಿವಾಸಿ ಸಯ್ಯದ್‌ ನಿಸಾರ್‌ ಅಹಮದ್‌ (61) ಮೃತಪಟ್ಟ ವೃದ್ದ. ಅನಾರೋಗ್ಯದ ನಿಮಿತ್ತ ಸಯ್ಯದ್‌ ನಿಸಾರ್‌ ಅಹಮದ್‌ ಅವರನ್ನು ಕುಟುಂಬಸ್ಥರು ಇಂದು ಬೆಳಗಿನ ಜಾವ 1.30 ರ ಸುಮಾರಿನಲ್ಲಿ ದೇವೇಗೌಡ ರಸ್ತೆಯ ವಿ ಕೇರ್‌ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಆಸ್ಪತ್ರೆ ಮುಂದೆ ಇಬ್ಬರು ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದರು. ಅದೇ ವೇಳೆಗೆ ಇವರ ಕಾರು ಬಂದಿದ್ದು, ಮುಂದೆ ಹೋಗಲು ಜಾಗ ಬಿಡಲಿಲ್ಲವೆಂಬ ಕಾರಣಕ್ಕೆ ಬೈಕ್‌ ಸವಾರರ ಜೊತೆ ಜಗಳವಾಗಿದೆ.ಕಾರಿನಲ್ಲಿದ್ದವರು ಇಳಿದು ಹೊರ ಬಂದು ಬೈಕ್‌ ಸವಾರರ ಜೊತೆ ಜಗಳವಾಡುತ್ತಿದ್ದಾಗ ಸಯ್ಯದ್‌ ನಿಸಾರ್‌ ಅಹಮದ್‌ ಅವರು ಸಹ ಬಂದಿದ್ದಾರೆ.

ಆ ಸಂದರ್ಭದಲ್ಲಿ ಎರಡು ಕಡೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ಕೈ ಕೈ ಮಿಲಾಯಿಸಿಕೊಂಡು ತಳ್ಳಾಟ ನೂಕಾಟವಾದಾಗ ಸಯ್ಯದ್‌ ನಿಸಾರ್‌ ಅಹಮದ್‌ ಅವರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.ಈ ಬಗ್ಗೆ ಆರ್‌ಟಿ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಸಯ್ಯದ್‌ ನಿಸಾರ್‌ ಅಹಮದ್‌ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೋ ಅಥವಾ ತಳ್ಳಾಟವಾದಾಗ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆಯೇ ಎಂಬುವುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ.

ಬಿಎಂಟಿಸಿ ಬಸ್‌‍ಗೆ ಸಿಕ್ಕಿ ಕೂಲಿ ಕಾರ್ಮಿಕ ಬಲಿ :
ಬಿಎಂಟಿಸಿ ಬಸ್‌‍ ಹತ್ತುತ್ತಿದ್ದಂತೆ ಬಸ್‌‍ ಚಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಚಕ್ರಕ್ಕೆ ಸಿಕ್ಕಿ ಗಂಭೀರ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಸಿಟಿ ಮಾರ್ಕೆಟ್‌ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಗೋವಿಂದಪುರದ ನಿವಾಸಿ ನಜೀರ್‌ಖಾನ್‌ (52) ಮೃತಪಟ್ಟ ಕೂಲಿ ಕಾರ್ಮಿಕ. ಸಿಟಿ ಮಾರ್ಕೆಟ್‌ನಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಸರಕು ಹಾಗೂ ಸಾಮಾನು ಸರಂಜಾಮುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಾ ಜೀವನ ನಡೆಸುತ್ತಿದ್ದರು.

ನಿನ್ನೆ ರಾತ್ರಿ 8 ಗಂಟೆ ಸುಮಾರಿನಲ್ಲಿ ಸಿಟಿ ಮಾರ್ಕೆಟ್‌ ಬಸ್‌‍ ನಿಲ್ದಾಣದ ಫ್ಲೈಓವರ್‌ ಕೆಳಗೆ ನಿಂತಿದ್ದ ಬಿಎಂಟಿಸಿ ಬಸ್‌‍ ಹತ್ತಲು ನಜೀರ್‌ಖಾನ್‌ ಮುಂದಾಗುತ್ತಿದ್ದಂತೆ ಬಸ್‌‍ ಚಲಿಸಿದೆ.ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ಅವರು ಬಸ್‌‍ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡರು.

ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಸಿಟಿ ಮಾರ್ಕೆಟ್‌ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆಎಸ್‌‍ಆರ್‌ಟಿಸಿ ಬಸ್‌‍ ಡಿಕ್ಕಿ : ವೃದ್ಧ ದುರ್ಮರಣ
ಬೈಕ್‌ಗೆ ಕೆಎಸ್‌‍ಆರ್‌ಟಿಸಿ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ವೃದ್ದ ಮೃತಪಟ್ಟಿರುವ ಘಟನೆ ಕೆಎಸ್‌‍ ಲೇಔಟ್‌ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಜರಗನಹಳ್ಳಿಯ ನಿವಾಸಿ ಗಂಗಾಧರಯ್ಯ(67) ಮೃತಪಟ್ಟ ಬೈಕ್‌ ಸವಾರ.

ಇಂದು ಬೆಳಗ್ಗೆ 8.45 ರ ಸುಮಾರಿನಲ್ಲಿ ಗಂಗಾಧರಯ್ಯ ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಕನಕಪುರ ರಸ್ತೆಯ ಜರಗನಹಳ್ಳಿ ಮೆಟ್ರೋ ಪಿಲ್ಲರ್‌ 79 ರ ಸಮೀಪ ಅತೀ ವೇಗವಾಗಿ ಬರುತ್ತಿದ್ದ ಕೆಎಸ್‌‍ಆರ್‌ಟಿಸಿ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ.ಈ ಬಗ್ಗೆ ಕೆಎಸ್‌‍ ಲೇಔಟ್‌ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News