ದೇವನಹಳ್ಳಿ,ಡಿ.11-ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಸಾರಿಗೆ ಬಸ್‌ಗೆ ಗುದ್ದಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಮೃತರನ್ನು ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಗ್ರಾಮದ ಸುಮನ್ (28), ಸಾಗರ್ (23) ಹಾಗೂ ಮೋಹನ್‌ಕುಮಾರ್(33) ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರದ ಕಡೆಯಿಂದ ಕಾರಿನಲ್ಲಿ ಈ ಮೂವರು ಯುವಕರು ರಾತ್ರಿ 11.30 ರ ಸಮಯದಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದಾಗ ರಾಣಿ ಕ್ರಾಸ್ ಸಮೀಪದ ಲಾಲಗೊಂಡನಹಳ್ಳಿ ಗೇಟ್ ಬಳಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಪ್ಪಳಿಸಿ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಏರ್ ಬ್ಯಾಗ್ ಇದ್ದರೂ ಸಹ ಜೀವ ಉಳಿಸಿಕೊಳ್ಳಲಾಗದೆ ಮೂವರೂ ಸಾವನ್ನಪ್ಪಿರುವುದು ದುರ್ದೈವ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಲ್ಲದೇ ಬಸ್‌ನ ಮುಂಭಾಗವೂ ಹಾನಿಯಾಗಿದ್ದು,ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತದ ಸುದ್ದಿ ತಿಳಿದು ದೇವನಹಳ್ಳಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡ ಬಸ್ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.
ನಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿದ್ದ ಮೂವರು ಯುವಕರ ಮೃತದೇಹಗಳನ್ನು ಹರಸಹಾಸ ಪಟ್ಟು ಹೊರ ತೆಗೆದು ನಂತರ ಆಕಾಶ್ ಆಸ್ಪತ್ರೆಗೆ ರವಾನಿಸಲಾಗಿದೆ.ಅತೀ ವೇಗದ ಚಾಲನೆಯೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಅಪಘಾತದಿಂದಾಗಿ ಹೈದಾರಾಬಾದ್ -ಬೆಂಗಳೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.ತದ ನಂತರ ಕ್ರೇನ್ ಮೂಲಕ ಕಾರನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಬಗ್ಗೆ ದೇವನಹಳ್ಳಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
