ಮೈಸೂರು,ಡಿ.30- ನಗರದ ನ್ಯಾಯಾಂಗ ಬಡಾವಣೆ, ಕಾವೇರಿ ನಗರ, ದಟ್ಟಗಳ್ಳಿ, ದಾಸನಕೊಪ್ಲು, ರವಿಶಂಕರ ಲೇಔಟ್, ರೂಪನಗರ ಸೇರಿದಂತೆ ಮತ್ತಿತರ ಕಡೆಯಲ್ಲಿ ಕೆಲವು ಮನೆಗಳಲ್ಲಿ ಮುಸುಕುಧಾರಿಗಳು ದರೋಡೆ ಮಾಡಿದ್ದು, ಬಡಾವಣೆ ಜನರು ಬೆಚ್ಚಿ ಬಿದ್ದಿದ್ದಾರೆ.
ಮುಸುಕುಧಾರಿಗಳು ಕೈಗಳಲ್ಲಿ ರಾಡು, ಮಚ್ಚುಗಳನ್ನು ಹಿಡಿದು ಓಡಾಡುತ್ತಾ ಮನೆಗಳಿಗೆ ನುಗ್ಗಿರುವ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಕಾವೇರಿ ನಗರದ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದು ಸಮೀಪದ ಹಳ್ಳದಲ್ಲೇ ಬಿಟ್ಟು ಹೋಗಿದ್ದಾರೆ.
ನ್ಯಾಯಾಂಗ ಬಡಾವಣೆಯ ಸಮೀಪವಿರುವ ಶಾಲೆಯೊಂದರಲ್ಲೂ ಕೂಡ ದ್ವಿಚಕ್ರ ವಾಹನ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.ರೂಪನಗರದ ಮನೆಯೊಂದರ ಬೀಗ ಮುರಿದು ಹಣ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಆದರೆ ಈ ದರೋಡೆ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿದ್ದು, ಜಯಪುರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಕೂಡಲೇ ಪೊಲೀಸರು ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.
