ನವದೆಹಲಿ, ಜು.26- ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ದೆಹಲಿ ದಂಗೆ ಹಿಂದೆ ನೆರೆಯ ಶತ್ರು ರಾಷ್ಟ್ರ ಪಾಕ್ ಕೈವಾಡವಿರುವುದು ಖಚಿತಪಟ್ಟಿದೆ. ಪಾಕ್ ಕುತಂತ್ರದ ಪೋಸ್ಟ್‌ಗಳಿಂದಲೇ ದೆಹಲಿಯಲ್ಲಿ ಹಿಂಸಾಚಾರ ನಡೆದ ಬಗ್ಗೆ ದೆಹಲಿ ಪೊಲೀಸರಿಗೆ ಖಚಿತ ಸುಳಿವು ಲಭ್ಯವಾಗಿದೆ. ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಕುರಿತು ದೆಹಲಿ ಸೆಂಟ್ರಲ್ ಡಿಸಿಪಿ ರೋಹಿತ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಈ ಮಾಹಿತಿ ನೀಡಿದ್ದಾರೆ.
ದೆಹಲಿ ದಂಗೆಯ ಹಿಂದೆ ಪಾಕ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಪ್ರತಿಭಟನೆಯ ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಿ ತನಿಖೆ ನಡೆಸ್ತಿದ್ದ ಪೊಲೀಸರಿಗೆ ಪಾಕಿಸ್ತಾನ ಮೂಲದ 400 ಮಂದಿ ಹಿಂಸಾಚಾರ ನಡೆಸಲು ಎಐ ವಿಡಿಯೋಗಳ ಬಳಕೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ನಕಲಿ ಮತ್ತು ದಾರಿ ತಪ್ಪಿಸುವ ವಿಷಯವನ್ನು ಹರಡಿದ್ದಕ್ಕಾಗಿ 480 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರುತಿಸಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನೀಟ್ ಹೋರಾಟದ ಸಂದರ್ಭದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಉದ್ರಿಕ್ತರ ವಿಧ್ವಂಸಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಲ್ಲು ತೂರಾಟ ನಡೆಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರಕ್ಕೆ ಪ್ರಚೋದಿಸಿದ ಕಿಡಿಗೇಡಿಗಳ ಕೃತ್ಯಗಳು ಸಿಸಿಟಿವಿಯಲ್ಲಿ ಬಟಾಬಯಲಾಗಿವೆ. ಜುಲೈ 20ರಂದು ನಡೆದಿದ್ದ ದಾಳಿಯ ದೃಶ್ಯಗಳು ರಿವೀಲ್ ಆಗಿವೆ.
ದೆಹಲಿ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಇಂದು ವಿಡಿಯೋಗಳನ್ನು ರಿಲೀಸ್ ಮಾಡಿದ್ದಾರೆ. ಪ್ರತಿಭಟನಾಕಾರರನ್ನು ತಡೆದಾಗ, ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲುಗಳು, ಚಪ್ಪಲಿಗಳು ಮತ್ತು ಇತರ ವಸ್ತುಗಳನ್ನು ಎಸೆದು ದೈಹಿಕವಾಗಿ ಹಲ್ಲೆ ನಡೆಸಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
