ಬೆಂಗಳೂರು, ಸೆ.4- ನಗರದಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆ ಖಾತರಿಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಮೇಲ್ಸೇತುವೆಗಳು ಮತ್ತು ಎಲಿವೇಟೆಡ್ ಕಾರಿಡಾರ್ಗಳಲ್ಲಿ ಹೊಸ ಸಂಚಾರ ನಿರ್ಬಂಧಗಳನ್ನು ಇಂದಿನಿಂದ ಜಾರಿಗೊಳಿಸಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಮೇಲ್ಸೇತುವೆಗಳಲ್ಲಿ ಅತಿಭಾರದ ವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಮೇಲ್ಸೇತುವೆಗಳು ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಕೆಲವು ನಿರ್ದಿಷ್ಟ ವರ್ಗದ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಹಾಗೂ ಸುರಕ್ಷತಾ ಸಮಸ್ಯೆಗಳು ಎದುರಾಗುತ್ತಿದ್ದವು.
ಈ ಹಿನ್ನೆಲೆಯಲ್ಲಿ ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಸಿಲ್ಕ್ ಬೋರ್ಡ್-ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಪಘಾತಗಳ ಪ್ರಮಾಣ, ವಿವಿಧ ವಾಹನಗಳ ವೇಗದಲ್ಲಿನ ವ್ಯತ್ಯಾಸ, ವಾಹನಗಳು ಕೆಟ್ಟು ನಿಲ್ಲುವುದರಿಂದ ಉಂಟಾಗುವ ದಟ್ಟಣೆ, ಮೇಲ್ಸೇತುವೆಗಳ ಪ್ರವೇಶ-ನಿರ್ಗಮನ ಭಾಗಗಳಲ್ಲಿನ ಸಮಸ್ಯೆಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಸಂಚಾರ ನಿರ್ವಹಣೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು ಸಂಚಾರ ವಿಭಾಗದ ಪ್ರಕಟಣೆಯಂತೆ, ಈ ಎಲ್ಲ ಮಾರ್ಗಗಳಲ್ಲಿ ಇಂದಿನಿಂದ ನಿರ್ಬಂಧ ಜಾರಿಗೆ ಬಂದಿದ್ದು, ಸಿಸಿಟಿವಿ ಮೂಲಕ ಕಣ್ಗಾವಲು ಇರಿಸಲಾಗುತ್ತದೆ. ಸಾರ್ವಜನಿಕರು ನಿಯಮಗಳನ್ನು ಪಾಲಿಸಿ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಯಾವ ಮಾರ್ಗದಲ್ಲಿ ಯಾವ ವಾಹನಕ್ಕೆ ನಿರ್ಬಂಧ?
ಬಿಜಿಎಸ್ ಫ್ಲೈಓವರ್- ಮೈಸೂರು ರಸ್ತೆ
- ಭಾರೀ ಸರಕು ಸಾಗಣೆ ವಾಹನಗಳಿಗೆ 24 ಗಂಟೆಯೂ ಪ್ರವೇಶವಿಲ್ಲ.
- ಇತರೆ ಸರಕು ಸಾಗಣೆ ವಾಹನಗಳು ಹಾಗೂ ಮೂರು ಚಕ್ರದ ಗೂಡ್ಸ್ ಆಟೋಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 10ರವರೆಗೆ ನಿರ್ಬಂಧ.
ಪೀಣ್ಯ ಎಲಿವೇಟೆಡ್ ಕಾರಿಡಾರ್
- ಪ್ರಯಾಣಿಕರ ಆಟೋರಿಕ್ಷಾ ಹಾಗೂ ಮೂರು ಚಕ್ರದ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ನಿರ್ಬಂಧ.
- ಭಾರೀ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸಂಚಾರ ನಿರ್ಬಂಧ.
ಸಿಲ್ಕ್ ಬೋರ್ಡ್-ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್
- ಭಾರೀ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ 24 ಗಂಟೆಯೂ ನಿರ್ಬಂಧ.
ಈ ಕಾರಿಡಾರ್ನಲ್ಲೂ ವಾಹನ ಅಪಘಾತಗಳು ಹಾಗೂ ವಾಹನಗಳು ಕೆಟ್ಟು ನಿಲ್ಲುವ ಘಟನೆಗಳು ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಕಂಡುಬಂದಿದೆ. ಮೇ 2026ರಲ್ಲಿ ರಾಗಿಗುಡ್ಡ ಕಡೆಗೆ ಸಾಗುತ್ತಿದ್ದ ಕಾರೊಂದು ಗೋಡೆಗೆ ಡಿಕ್ಕಿಯಾದ ಘಟನೆಯೂ ವರದಿಯಾಗಿತ್ತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್
ಸಂಜೀವನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗಿನ ಈ ಮಾರ್ಗದಲ್ಲಿ:
- ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾಗಳಿಗೆ 24 ಗಂಟೆಯೂ ನಿರ್ಬಂಧ.
- ಎಲ್ಲ ವರ್ಗದ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ.
ಅಪಘಾತಗಳ ಹಿನ್ನೆಲೆ
ಮೇಲ್ಸೇತುವೆಗಳಲ್ಲಿ ವೇಗವಾಗಿ ಸಂಚರಿಸುವ ಕಾರುಗಳು, ಭಾರೀ ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳು ಒಂದೇ ಮಾರ್ಗವನ್ನು ಬಳಸಿದಾಗ ವಾಹನಗಳ ವೇಗದಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅದರ ತೀವ್ರತೆ ಹೆಚ್ಚುವ ಸಾಧ್ಯತೆಯೂ ಇರುತ್ತದೆ.
ಇದೇ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ರಸ್ತೆ ವಿನ್ಯಾಸ, ಮೇಲ್ಸೇತುವೆಯ ಅಗಲ, ಅಪಘಾತಗಳ ಪ್ರಮಾಣ ಮತ್ತು ತೀವ್ರತೆ, ವಾಹನಗಳು ಕೆಟ್ಟು ನಿಲ್ಲುವುದರಿಂದ ಉಂಟಾಗುವ ದಟ್ಟಣೆ ಹಾಗೂ ಪ್ರವೇಶ-ನಿರ್ಗಮನ ಭಾಗಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಗರದ ವಿವಿಧ ಎಲಿವೇಟೆಡ್ ಕಾರಿಡಾರ್ಗಳಲ್ಲಿ ಸಣ್ಣ ಹಾಗೂ ಭಾರೀ ವಾಹನಗಳ ನಡುವಿನ ವೇಗದ ವ್ಯತ್ಯಾಸ, ರಸ್ತೆ ಬದಿಯಲ್ಲಿ ವಾಹನಗಳು ಕೆಟ್ಟು ನಿಲ್ಲುವುದು ಹಾಗೂ ಅಪಘಾತದ ಬಳಿಕ ತ್ವರಿತವಾಗಿ ವಾಹನ ತೆರವುಗೊಳಿಸಲು ಎದುರಾಗುವ ತೊಂದರೆಗಳು ಪ್ರಮುಖ ಸವಾಲಾಗಿ ಪರಿಣಮಿಸಿವೆ.
ಡಬಲ್ ಡೆಕ್ಕರ್ನಲ್ಲೂ ಹೊಸ ಸವಾಲು
ಸಿಲ್ಕ್ ಬೋರ್ಡ್-ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್ ಇತ್ತೀಚೆಗಷ್ಟೇ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ನ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಮೂಡಿಸಿತ್ತು.
ಏಪ್ರಿಲ್ 2026ರಲ್ಲಿ ಎರಡೂ ದಿಕ್ಕಿನಲ್ಲಿ ಸಂಚಾರ ಆರಂಭವಾದ ಬಳಿಕ ಸಿಲ್ಕ್ ಬೋರ್ಡ್ ಜಂಕ್ಷನ್ನ ದಟ್ಟಣೆಯಲ್ಲಿ ಸ್ವಲ್ಪ ಮಟ್ಟಿನ ಪರಿಹಾರ ಕಂಡುಬಂದಿದ್ದರೂ, ಫ್ಲೈಓವರ್ನ ನಿರ್ಗಮನ ಭಾಗಗಳಲ್ಲಿ ಹೊಸದಾಗಿ ವಾಹನ ದಟ್ಟಣೆ ಉಂಟಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ.
ಹೀಗಾಗಿ ಪ್ರಮುಖ ಮೇಲ್ಸೇತುವೆಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಮೂಲಕ ಅಪಘಾತದ ಅಪಾಯ ಕಡಿಮೆ ಮಾಡುವುದು ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡುವುದು ಸಂಚಾರ ಪೊಲೀಸರ ಉದ್ದೇಶವಾಗಿದೆ.
