Sunday, September 8, 2024
Homeರಾಜ್ಯಶಾಲೆಗಳು ಶುರುವಾಗುತ್ತಿದ್ದಂತೆ ಮಹಿಳೆಯರಿಗೆ ಫುಲ್ ಟೆನ್ಶನ್

ಶಾಲೆಗಳು ಶುರುವಾಗುತ್ತಿದ್ದಂತೆ ಮಹಿಳೆಯರಿಗೆ ಫುಲ್ ಟೆನ್ಶನ್

ಬೆಂಗಳೂರು, ಮೇ 30- ತರಕಾರಿಗಳ ಬೆಲೆ ಇಳಿತಾ ಇಲ್ಲ… ಶಾಲೆಗಳು ಪ್ರಾರಂಭವಾಗಿವೆ. ಮಕ್ಕಳಿಗೆ ದಿನನಿತ್ಯ ಏನ್‌ ತಿಂಡಿ ಮಾಡಿ ಕಳ್ಸೋದು ಎಂದು ಮಹಿಳೆಯರಲ್ಲಿ ಚಿಂತೆ ಶುರುವಾಗಿದೆ. ಕಳೆದ ಎರಡು ತಿಂಗಳಿನಿಂದ ಶಾಲಾ-ಕಾಲೇಜುಗಳಿಗೆ ರಜೆ ಇದ್ದು, ಮಕ್ಕಳು ಮನೆಯಲ್ಲೆ ಇದ್ದರು, ಕೆಲ ಮಕ್ಕಳ ಊರು ಸೇರಿದ್ದರು. ಈ ವೇಳೆ ತಿಂಡಿಯ ಚಿಂತೆ ಇರಲಿಲ್ಲ. ಮನೆಯಲ್ಲೆ ಇರೋ ತರಕಾರಿ ಹಾಕಿ ಅಡುಗೆ ಮಾಡಿ ದಿನ ಕಳೆಯುತ್ತಿದ್ದೆವು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ದಿನನಿತ್ಯ ತಿಂಡಿ ಮಾಡಲೇಬೇಕು. ತರಕಾರಿ ಇಲ್ಲದೆ ಯಾವ ತಿಂಡಿ ಮಾಡೋದು, ಬ್ಯಾಗು ಇಡಿದು ತರಕಾರಿ ಅಂಗಡಿಗಳಿಗೆ ಹೋದರೆ ಬೆಲೆ ನೋಡಿ ತಲೆ ತಿರುಗುತ್ತೆ ಎಂದು ಸಾಮಾನ್ಯವರ್ಗದ ಮಹಿಳೆಯರ ಸಾಮಾನ್ಯ ಮಾತುಗಳಿವು.

ಕಳೆದ ಸುಮಾರು ಒಂದು ತಿಂಗಳಿನಿಂದಲೂ ತರಕಾರಿಗಳ ಬೇಲೆ ಷೇರು ಮಾರುಕಟ್ಟೆಯಂತೆ ಏರುತ್ತಲೆ ಇದೆ. ಸದ್ಯಕ್ಕೆ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅಪರೂಪಕ್ಕೆ ಬಳಸುತ್ತಿದ್ದ ತರಕಾರಿಗಳ ಬೆಲೆಯೂ ಸಹ ಏರಿಕೆಯಾಗಿದ್ದು, ಮಾಹಿಳೆಯರ ಸಾಸಿವೆ ಡಬ್ಬಿ ಹಣ ಖಾಲಿಯಾಗುವಂತೆ ಮಾಡುತ್ತಿದೆ.

ಮಕ್ಕಳಿಗೆ ಶುಚಿ-ರುಚಿಯಾದ ತಾಜಾ ತಿಂಡಿ-ಊಟ ಕೊಡಬೇಕು ಎಂದು ಕೆಲ ಖಾಸಗಿ ಶಾಲೆಗಳ ನಿಯಮ ಇದೆ. ಅದರಲ್ಲಿ ಚಿಕ್ಕಮಕ್ಕಳಿಗೆ ಮೆನೂ ಕೂಡ ಇದೆ. ಒಂದು ಕಡೆ ಶಾಲೆ ಫೀಸ್‌ ಕಟ್ಟಿ ಕೈ ಖಾಲಿ… ದಿನನಿತ್ಯ ತರಕಾರಿ ತರಬೇಕು ಅಂದ್ರೆ ಕನಿಷ್ಟ 150 ರೂ.ಬೇಕು ಎಂಬುದು ಪೊಷಕರ ನೋವಿನ ಮಾತಾಗಿದೆ.

ಬೀನ್‌್ಸ ಬರೋಬ್ಬರಿ ದ್ವಿಶತಕ ಬಾರಿಸಿ ಮುನ್ನುಗ್ಗುತ್ತಿದೆ. ಕ್ಯಾರೆಟ್‌ ಕೆಜಿಗೆ 100, ನವಿಲುಕೋಸು, 60, ಆಲೂಗೆಡ್ಡೆ 50, ಹಸಿ ಬಟಾಣಿ 200. ಕ್ಯಾಪ್ಸಿಕಂ 80, ಬದನೆಕಾಯಿ 60, ಮೂಲಂಗಿ 60, ಹಾಗಲಕಾಯಿ 60, ಈರೇಕಾಯಿ, 80. ಗೋರಿಕಾಯಿ 60, ಪಡವಲಕಾಯಿ 50, ಹಸಿಮೆಣಸಿನಕಾಯಿ 120ರೂ.ಗೆ ಮರಾಟವಾಗುತ್ತಿದೆ.

ಇನ್ನು ಇದೇ ಮೊದಲ ಬಾರಿಗೆ ಸೌತೆಕಾಯಿ ಬೆಲೆ ಕೆಜಿಗೆ 80 ರೂ.ಗೆ ಮಾರಾಟ ವಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಇತ್ತೀಚೆಗೆ ರಾಜ್ಯದ ವಿವಿಧೆಡೆ ಮಳೆಯಾಗಿದ್ದು, ಇರುವ ಟೊಮ್ಯಾಟೋ ಬೆಳೆಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ನಿಧಾನವಾಗಿ ಬೆಲೆ ಏರಿಕೆಯಾಗುತ್ತಿದ್ದು, ಕೆಜಿಗೆ 60 ರೂ. ತಲುಪಿದೆ. ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಹಿಂದೆಂದೂ ಕಂಡುಕೇಳರಿಯದ ರಣ ಬೇಸಿಗೆಯಿಂದ ರೈತರು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿ ತರಕಾರಿ ಬೆಳೆ ಬೆಳೆಯಲು ಮುಂದಾಗದ ಕಾರಣ ಉತ್ಪಾದನೆ ಕುಂಠಿತವಾಗಿ ಬೆಲೆ ಏರಿಕೆಯಾಗಿದೆ. ಇನ್ನೇನು ಮಳೆ ಬಂದಿದೆ ತರಕಾರಿ ಬೆಲೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ನಗರದ ಬಹಳ ಜನರಲ್ಲಿತ್ತು. ಆದರೆ ಅದು ಹಾಗಗಲ್ಲ, ಸೊಪ್ಪನ್ನು ಹೊರತುಪಡಿಸಿ ಯಾವುದೆ ತರಕಾರಿ ನಾಟಿ ಅಥವಾ ಬಿತ್ತನೆ ಮಾಡಿ ಎರಡರಿಂದ ಮೂರು ತಿಂಗಳಿಗೆ ಫಸಲಿಗೆ ಬರುತ್ತವೆ. ಒಂದು ವೇಳೆ ನೀರಿನ ಲಭ್ಯತೆ ಇರುವ ರೈತರು ಬೆಳೆದ ಬೆಳೆ ಮಾರುಕಟ್ಟೆಗೆ ಬಂದರೆ ಬೆಲೆ ಕಡಿಮೆಯಾಗಬಹುದು ಅಷ್ಟೆ.

ಈರುಳ್ಳಿ ಬೆಲೆಯಲ್ಲಿ ತುಸು ಏರಿಕೆ: ಕಳೆದ ಕೆಲ ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಈರುಳ್ಳಿ ನಿಧಾನವಾಗಿ ಏರಿಕೆಯಾಗುತ್ತಿದೆ. ಈರುಳ್ಳಿ ಹೆಚ್ಚಾಗಿ ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಜತೆಗೆ ಕೆಲವು ಕಡೆ ಬೆಳೆ ನಾಶವಾಗಿರುವುದರಿಂದ ಉತ್ಪಾದನೆಯಲ್ಲಿ ಇಳಿಮುಖವಾಗಿ ಬೆಲೆ ಹೆಚ್ಚಾಗಲಿದೆ ಎಂದು ವರ್ತಕರು ತಿಳಿಸಿದ್ದಾರೆ.

ಏನೇ ಆಗಲಿ ಬೆಂಗಳೂರಿನಂತಹ ನಗರಗಳಲ್ಲಿ ಅಡುಗೆ ಮನೆಯಲ್ಲಿ ಒಂದೇ ಒಂದು ವಸ್ತು ಇಲ್ಲದಿದ್ದರೂ ತೊಂದರೆಯೇ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಹಾಗಾಗುವುದಿಲ್ಲ. ಪಕ್ಕದ ಮನೆಯವರ ಬಳಿ ಎರಡು ಟೊಮ್ಯಾಟೋಪಡೆದು ಅಡುಗೆ ಮಾಡಿ ಅಂದಿನ ದಿನ ತಳ್ಳಬಹುದು ಅಲ್ಲವೆ..?

RELATED ARTICLES

Latest News