Friday, November 22, 2024
Homeರಾಜಕೀಯ | Politicsಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪಕ್ಕೆ ಪರಮೇಶ್ವರ್‌ ತಿರುಗೇಟು

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪಕ್ಕೆ ಪರಮೇಶ್ವರ್‌ ತಿರುಗೇಟು

ಬೆಂಗಳೂರು,ಜು.6- ದಿಶಾ ಸಮಿತಿಯ ಸಭೆಗಳನ್ನು ಹೊರತುಪಡಿಸಿ ಕೇಂದ್ರ ಸಚಿವರು ನೇರವಾಗಿ ರಾಜ್ಯಸರ್ಕಾರದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲು ಅವಕಾಶ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡಿದ ಪರಮೇಶ್ವರ್‌ರವರು, ಮುಖ್ಯಮಂತ್ರಿ ಹಾಗೂ ರಾಜ್ಯದ ಸಚಿವರನ್ನು ಹೊರತುಪಡಿಸಿ ಕೇಂದ್ರ ಸಚಿವರಿಗೆ ರಾಜ್ಯದ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲು ಅವಕಾಶಗಳಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಕುಮಾರಸ್ವಾಮಿಯವರಿಗೆ ಈ ವಿಚಾರ ಚೆನ್ನಾಗಿ ಗೊತ್ತಿದೆ. ಆದರೂ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿಯಾದವರು ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಶಿಷ್ಟಾಚಾರದ ಪಾಲನೆಗೆ ಸೂಚನೆಗಳನ್ನು ಸರ್ಕಾರ ನೀಡುತ್ತದೆ. ಕುಮಾರಸ್ವಾಮಿ ಕೇಂದ್ರದ ಸಚಿವರಾಗಿದ್ದಾರೆ. ಅವರಿಗೆ ಪ್ರತ್ಯೇಕ ಶಿಷ್ಟಾಚಾರಗಳಿರುತ್ತವೆ. ಸಂಸದರು ಮತ್ತು ಕೇಂದ್ರ ಸಚಿವರಿಗೆ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ನಡೆಸಲು ದಿಶಾ ಸಮಿತಿ ಸಭೆಗಳಿರುತ್ತವೆ.

ಜೊತೆಗೆ ರಾಜ್ಯಸರ್ಕಾರದ ಸಚಿವರು ನಡೆಸುವ ಸಭೆಗಳಲ್ಲಿ ಭಾಗವಹಿಸಬಹುದು. ಅವರೇ ನೇರವಾಗಿ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲು ಅವಕಾಶವಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯ ನಿಯಮಾವಳಿಗಳ ಪಾಲನೆಯಾಗಿತ್ತು ಎಂದು ಪ್ರತಿಪಾದಿಸಿದರು.

ಸಂಸದರಾಗಿದ್ದ ಡಿ.ಕೆ.ಶಿವಕುಮಾರ್‌ ಸಭೆ ಮಾಡಿ, ಪ್ರಗತಿ ಪರಿಶೀಲನೆ ನಡೆಸಿದ ಮಾಹಿತಿ ತಮಗಿಲ್ಲ. ನಾಲ್ಕು ಮಂದಿ ಅಧಿಕಾರಿಗಳನ್ನು ಕರೆದು ಚರ್ಚೆ ಮಾಡಿರಬಹುದು. ಆದರೆ ಪ್ರಗತಿ ಪರಿಶೀಲನೆ ನಡೆಸಲು ಅವರಿಗೂ ಅವಕಾಶವಿರಲಿಲ್ಲ ಎಂದರು.

ಮುಡಾ ನಿವೇಶನ ಹಂಚಿಕೆ ಹಗರಣ ಬಯಲಾಗಿರುವುದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕೈವಾಡವಿದೆ ಎಂದು ಕುಮಾರಸ್ವಾಮಿಯವರು ಮಾಡಿರುವ ಆರೋಪ ಆಧಾರರಹಿತ. ಈ ಬಗ್ಗೆ ಖುದ್ದು ಡಿ.ಕೆ.ಶಿವಕುಮಾರ್‌ರವರೇ ಸ್ಪಷ್ಟನೆ ನೀಡಿ ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.

ವಾಲೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಗತ್ಯ ಕಂಡುಬಂದರೆ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸವರಾಜ ದದ್ದಲ್‌ ಅವರನ್ನು ವಿಚಾರಣೆಗೊಳಪಡಿಸಲಿದೆ ಎಂದರು.

ಮಾಹಿತಿ ಪಡೆಯುವ ಸಲುವಾಗಿ ಅವಶ್ಯಕತೆ ಇರುವವರಿಗೆ ನೋಟೀಸ್‌‍ ಕೊಟ್ಟು ವಿಚಾರಣೆಗೆ ಕರೆಯುತ್ತಾರೆ. ನಾಗೇಂದ್ರ ಅವರ ಮೂರ್ನಾಲ್ಕು ಜನ ಆಪ್ತ ಸಹಾಯಕರಿಗೆ ಈಗಾಗಲೇ ನೋಟೀಸ್‌‍ ಕೊಟ್ಟು ವಿಚಾರಣೆ ನಡೆಸಲಾಗಿದೆ. ಅಗತ್ಯ ಬಿದ್ದರೆ ನಾಗೇಂದ್ರ ಅವರಿಗೂ ನೋಟೀಸ್‌‍ ನೀಡಲಾಗುವುದು ಎಂದು ನುಡಿದರು.

ಹುಬ್ಬಳ್ಳಿಯಲ್ಲಿನ ಸಿದ್ದರಾಮೋತ್ಸವದ ಬಗ್ಗೆ ಈವರೆಗೂ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಿರಿಯ ಪೊಲೀಸ್‌‍ ಅಧಿಕಾರಿಯ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಪಾಲನೆಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಪ್ರತಿ ವರ್ಷ ಎರಡು ಬಾರಿ ಎಸ್ಪಿ ದರ್ಜೆಗಿಂತಲೂ ಮೇಲ್ಪಟ್ಟ ಅಧಿಕಾರಿಗಳ ಸಮೇಳನವನ್ನು ನಡೆಸಲಾಗುತ್ತದೆ.

ಸರ್ಕಾರದ ಆದ್ಯತೆಗಳೇನು? ಪೊಲೀಸ್‌‍ ಇಲಾಖೆ ಯಾವ ರೀತಿ ನಡೆದುಕೊಳ್ಳಬೇಕು. ಸಮಸ್ಯೆಗಳೇನು? ಅಗತ್ಯಗಳೇನು? ಎಂಬ ಬಗ್ಗೆ ಚರ್ಚೆ ಮಾಡಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇರಬೇಕು ಎಂಬ ಬಗ್ಗೆಯೂ ಮಾರ್ಗದರ್ಶನ ನೀಡಲಾಗುವುದು ಎಂದರು.

RELATED ARTICLES

Latest News