ಬೆಳಗಾವಿ, ಡಿ.6- ಹಿಂದುಳಿದ ವರ್ಗದ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಂದ ಸ್ವಾವಲಂಬಿ ಗಂಗಾಕಲ್ಯಾಣ ಯೋಜನೆಯಡಿ ನಿರೀಕ್ಷಿತ ಮಟ್ಟದಲ್ಲಿ ಬೋರ್‌ವೆಲ್ ಗಳ ಮಂಜೂರಾತಿ ಆಗುತ್ತಿಲ್ಲ ಎಂದು ಪಕ್ಷಾತೀತವಾಗಿ ಶಾಸಕರು ವಿಧಾನಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರದ ಅವಧಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಮತ್ತು ಚಾಮರಾಜನಗರದ ಪುಟ್ಟರಂಗಶೆಟ್ಟಿ ಅವರು ಕೇಳಿದ ಪ್ರಶ್ನೆಗಳು ವ್ಯಾಪಕ ಚರ್ಚೆಗಳಿಗೆ ಗ್ರಾಸವಾಯಿತು.
ಪುಟ್ಟರಂಗಶೆಟ್ಟಿಯವರು ಪ್ರಶ್ನೆ ಕೇಳುತ್ತಾ, ವಿವಿಧ ಅಭಿವೃದ್ಧಿ ನಿಗಮಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಆದರೆ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ಜನರಿಗೆ ಸೌಲಭ್ಯ ಸಿಗುತ್ತಿಲ್ಲ . ಪ್ರತಿದಿನ ಅರ್ಜಿ ಹಿಡಿದು ಸಾವಿರಾರು ಮಂದಿ ನಮ್ಮ ಮನೆಬಾಗಿಲಿಗೆ ಬರುತ್ತಿದ್ದಾರೆ. ಅವರಿಗೆ ಸಮಜಾಯಿಷಿ ನೀಡುವುದೇ ಕಷ್ಟವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿ.ಸಿ.ಪಾಟೀಲ್ ಮಾತನಾಡಿ, ವಿವಿಧ ಅಭಿವೃದ್ಧಿ ನಿಗಮಗಳಿಂದ ಸ್ವಾವಲಂಬಿ ಗಂಗಾ ಕಲ್ಯಾಣ ಯೋಜನೆಯಡಿ ಒಂದು ಅಥವಾ ಎರಡು ಬೋರ್‍ವೆಲ್‍ಗಳನ್ನು ಮಂಜೂರು ಮಾಡುತ್ತಿದ್ದಾರೆ. ಇದರಿಂದ ಫಲಾನುಭವಿಗಳ ಆಯ್ಕೆ ಕಷ್ಟವಾಗುತ್ತಿದೆ ಎಂದು ಆಕ್ಷೇಪಿಸಿದರು. ಶಾಸಕ ಸಿದ್ಧು ಸವದಿ ಇದಕ್ಕೆ ಧ್ವನಿಗೂಡಿಸಿದರು.
ಉತ್ತರ ನೀಡಿದ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ ತಂಗಡಗಿ ಈ ಹಿಂದಿನ ಸರ್ಕಾರದಲ್ಲಿ ಭಾಷಣ ಮಾಡಿದ ಕಡೆಯಲ್ಲೆಲ್ಲಾ ಜಾತಿವಾರು ಅಭಿವೃದ್ಧಿ ನಿಗಮಗಳನ್ನು ಘೋಷಣೆ ಮಾಡಲಾಗಿದೆ.
ಮತ್ತೆ ಅಮೆರಿಕ ಅಧ್ಯಕ್ಷನಾದರೆ ಸರ್ವಾಧಿಕಾರಿಯಾಗಿ ಬದಲಾಗುವುದಿಲ್ಲ : ಟ್ರಂಪ್
ಆದರೆ ಸರಿಯಾದ ಅನುದಾನ ಹಂಚಿಕೆ ಮಾಡಿಲ್ಲ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮಡಿವಾಳ, ನೇಕಾರ, ಉಪ್ಪಾರ, ಗಾಣಿಗ, ವಿಶ್ವಕರ್ಮ, ಸವಿತ ಸಮಾಜ ಸೇರಿದಂತೆ 11 ಕ್ಕೂ ಹೆಚ್ಚು ನಿಗಮಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಅನುದಾನ ನೀಡಿಲ್ಲ. ನಾವು ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿದ್ದು, ನಿಗಮಗಳನ್ನು ನೋಂದಣಿ ಮಾಡಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ದೇವರಾಜು ಅರಸು ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಅನುದಾನವಿದೆ. ಬೋರ್‍ವೆಲ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿರುವ ಸಮುದಾಯಗಳ ನಿಗಮಗಳಿಗೆ ಅನುದಾನ ಇಲ್ಲ. ಆದರೂ ವಿವಿಧ ಸೌಲಭ್ಯಗಳ ಹಂಚಿಕೆಗೆ ಗುರಿ ನಿಗದಿಪಡಿಸಲಾಗಿದೆ.
ಹಿಂದಿನ ಆರ್ಥಿಕ ವರ್ಷದಲ್ಲಿ ಲಭ್ಯವಿರುವ ಅನುದಾನದ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಫೆಬ್ರವರಿಯ ವೇಳೆಗೆ ಸ್ವಾವಲಂಬಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್‍ಗಳನ್ನು ಕೊರೆಸಲಾಗುವುದು ಎಂದರು. ಸಭಾಧ್ಯಕ್ಷ ಯು.ಟಿ.ಖಾದರ್‍ರವರು ಫೆಬ್ರವರಿಯಲ್ಲಿ ಸಾಧ್ಯವಾಗದಿದ್ದರೆ ಮಾರ್ಚ್ ಒಳಗಾದರೂ ಬೋರ್‍ವೆಲ್ ಕೊರೆಸುವ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಗೆದ್ದ 3 ರಾಜ್ಯಗಳಲ್ಲಿ ಬಿಜೆಪಿಯ ಹೊಸ ಮುಖಗಳಿಗೆ ಸಿಎಂ ಸ್ಥಾನ
ಶಾಸಕ ಧೀರಜ್ ಮುನಿರಾಜು ಕೂಡ ಅನುದಾನದ ಅಲಭ್ಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರಾದ ಚಂದ್ರಪ್ಪ ಅವರು ಇದರಲ್ಲಿ ಭಾಗವಹಿಸಿ ಆನ್‍ಲೈನ್‍ನಲ್ಲಿ ಅರ್ಜಿ ಪಡೆಯುತ್ತಾರೆ. 4 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ. ಇವರು ಒಬ್ಬರಿಗೆ ಮಾತ್ರ ಸೌಲಭ್ಯ ನೀಡುವುದರಿಂದ ಸಾವಿರಾರು ಮಂದಿ ದಿನ ಬೆಳಗಾದರೆ ಶಾಸಕರ ಬಳಿ ಬಂದು ಸೌಲಭ್ಯ ಕೊಡಿಸಿ ಎಂದು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದರು.
ಸುರೇಶ್‍ಬಾಬು ಅವರು ಮಧ್ಯಪ್ರವೇಶಿಸಿ ಪ್ರತಿ ವರ್ಷವೂ ಯೋಜನೆಗಾಗಿ ಹೊಸದಾಗಿ ಅರ್ಜಿ ಹಾಕಲು ಒಂದು ಸಾವಿರ ರೂ. ಖರ್ಚಾಗುತ್ತಿದೆ. ಅದರ ಬದಲು ಒಮ್ಮೆ ಸಲ್ಲಿಕೆಯಾದ ಅರ್ಜಿಯನ್ನೇ ಯೋಜನೆ ಸಿಗುವವರೆಗೂ ಅಥವಾ ಜೀವನಪರ್ಯಂತ ಪರಿಗಣಿಸುವಂತೆ ಸಲಹೆ ನೀಡಿದರು.
ಆಡಳಿತ ಪಕ್ಷದ ಶಾಸಕ ನರೇಂದ್ರಸ್ವಾಮಿ ಹಿಂದಿನ ಸರ್ಕಾರದಲ್ಲಿ ಒಂದು ಬೋರ್‍ವೆಲ್ ಕೂಡ ಕೊರೆಸಿಲ್ಲ. ಅದರ ಬಗ್ಗೆ ವಿರೋಧ ಪಕ್ಷಗಳ ಶಾಸಕರು ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.