Saturday, May 18, 2024
Homeರಾಜ್ಯಡಿಕೆಶಿಗೆ ಸಿಎಂ ಪಟ್ಟ ಖಚಿತ

ಡಿಕೆಶಿಗೆ ಸಿಎಂ ಪಟ್ಟ ಖಚಿತ

ಬೆಂಗಳೂರು, ಅ.27- ಹಲವು ದಿನಗಳಿಂದ ತೆರೆ ಮರೆಯಲ್ಲೇ ನಡೆಯುತ್ತಿದ್ದ ಅಧಿಕಾರ ಹಸ್ತಾಂತರದ ಚರ್ಚೆಗೆ ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿ ಮಹತ್ವದ ಹೇಳಿಕೆ ನೀಡಿದ್ದು, ಎರಡುವರೆ ವರ್ಷದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನ ಗಳಿಸಿ ಅಧಿಕಾರ ಹಿಡಿದ ಬೆನ್ನಲ್ಲೆ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ದೆಹಲಿಯಲ್ಲಿ ಐದು ದಿನಗಳ ಕಾಲ ಭಾರೀ ಕಸರತ್ತು ನಡೆದಿತ್ತು. ಅಳೆದು ತೂಗಿ ನಿರ್ಣಯ ಕೈಗೊಂಡ ಹೈಕಮಾಂಡ್ ಕೊನೆಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿತ್ತು.

ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಜೊತೆಗೆ ಲೋಕಸಭೆ ಚುನಾವಣೆಯವರೆಗೂ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರೆಸಿದೆ. ಈ ನಿರ್ಣಯಗಳನ್ನು ಅಧಿಕೃತವಾಗಿ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಧಿಕಾರ ಹಂಚಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಅನಂತರ ಈ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವಾರು ಮಂದಿ ಅಧಿಕಾರ ಹಂಚಿಕೆಯ ಸೂತ್ರ ದೆಹಲಿ ಮಟ್ಟದಲ್ಲಿ ನಿರ್ಣಯವಾಗಿದೆ. ಎರಡುವರೆ ವರ್ಷದ ಬಳಿಕ ಸಿದ್ದರಾಮಯ್ಯ ಅವರು, ಅಧಿಕಾರ ಬಿಟ್ಟುಕೊಡಲಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದ್ಧಂತಿಗಳು ವ್ಯಾಪಕವಾಗಿವೆ. ಆದರೆ ಎಲ್ಲಿಯೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.

ಈ ನಡುವೆ ಅಕಾರ ಹಂಚಿಕೆಯಾಗಿಲ್ಲ. ಸಿದ್ದರಾಮಯ್ಯ ಅವರೇ ಅವಧಿ ಪೂರೈಸಲಿದ್ದಾರೆ ಎಂದು ಹಲವಾರು ಮಂದಿ ಹೇಳಿಕೆ ನೀಡಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ್, ಕೆ.ಎನ್.ರಾಜಣ್ಣ. ಶಾಸಕರಾದ ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕರು ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಅತ್ತ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಕುಣಿಗಲ್ ರಂಗನಾಥ್, ಹೆಚ್.ಸಿ.ಬಾಲಕೃಷ್ಣ ಸೇರಿದಂತೆ ಅನೇಕರು ಡಿ.ಕೆ.ಶಿವಕುಮಾರ್ ಪರವಾಗಿ ಮಾತನಾಡಿದ್ದಾರೆ.

ಇದೇ ಮೊದಲ ಬಾರಿಗೆ ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿ ಅಕಾರ ಹಂಚಿಕೆಯಾಗಲಿದೆ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮಲ್ಲಿ ಯಾವುದೇ ಬಣಗಳಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಕಾರಣಕ್ಕೆ ಆತಂಕಗೊಂಡು ಬಿಜೆಪಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಪ್ರಸ್ತುತ ಅಧಿಕಾರ ಹಂಚಿಕೆಯ ಕುರಿತು ಚರ್ಚೆ ಅನಗತ್ಯ ಎಂದು ಹೇಳುತ್ತಲೇ ಗಣಿಗ ರವಿ, ಅಧಿಕಾರ ಹಂಚಿಕೆ ಹೈಕಮಾಂಡ್‍ಗೆ ಬಿಟ್ಟ ವಿಚಾರ, ಆದರೆ ಎರಡುವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಸ್ಪಷ್ಟ ಎಂದಿದ್ದಾರೆ.

ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಪಕ್ಷಕ್ಕೆ ದುಡಿದಿದ್ದಾರೆ. ಹಾಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಖಾತ್ರಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜನಪರ ಕಲ್ಯಾಣಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ವಿರೋಧ ಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಕಾರ ಹಂಚಿಕೆಯ ಚರ್ಚೆ ಈಗ ಅಪ್ರಸ್ತುತ, ಕಾಲ ಬಂದಾಗ ಎಲ್ಲವೂ ನಿರ್ಣಯವಾಗುತ್ತದೆ ಎಂದಿದ್ದಾರೆ.

RELATED ARTICLES

Latest News