ಬೆಂಗಳೂರು, ಮಾ.4- ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದಿದ್ದ 4ನೇ ಟೆಸ್ಟ್ ಪಂದ್ಯದಿಂದ ವೇಗಿ ಜಸ್‍ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಇಂಗ್ಲೆಂಡ್ ವಿರುದ್ಧ ಉತ್ತಮ ಫಾರ್ಮ್‍ನಲ್ಲಿದ್ದ ಬುಮ್ರಾ ಕಳೆದ 3 ಪಂದ್ಯಗಳಲ್ಲಿ ತಂಡದಲ್ಲಿ ಆಡಿದ್ದ ಏಕೈಕ ವೇಗದ ಬೌಲರ್ ಆಗಿದ್ದರು. ಮೊಹಮ್ಮದ್ ಸಿರಾಜ್‍ಗೆ 2ನೇ ಟೆಸ್ಟ್‍ನಿಂದ ವಿಶ್ರಾಂತಿ ನೀಡಿ ಮುಕೇಶ್‍ಕುಮಾರ್‍ಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ರಾಜ್‍ಕೋಟ್ ಟೆಸ್ಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬುಮ್ರಾಗೆ ರಾಂಚಿ ಟೆಸ್ಟ್‍ನಲ್ಲಿ ವಿಶ್ರಾಂತಿ ನೀಡಿದ್ದು ಗವಾಸ್ಕರ್ ಕಣ್ಣು ಕೆಂಪಾಗಿಸಿದೆ.
ರಾಜ್‍ಕೋಟ್ ಟೆಸ್ಟ್‍ನಲ್ಲಿ ಬುಮ್ರಾ ಮೊದಲ ಇನಿಂಗ್ಸ್‍ನಲ್ಲಿ 15 ಹಾಗೂ ದ್ವಿತೀಯ ಇನಿಂಗ್ಸ್ 8 ಓವರ್ ಮಾಡಿದ್ದರಷ್ಟೇ. ಇಷ್ಟಕ್ಕೆ ಅವರಿಗೆ ರಾಂಚಿಯಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಬೇಕಿತ್ತೆ ಎಂದು ಗವಾಸ್ಕರ್ ಬಿಸಿಸಿಐ ಕ್ರಮವನ್ನು ಟೀಕಿಸಿದ್ದಾರೆ. ಎರಡನೇ ಹಾಗೂ ಮೂರನೇ ಟೆಸ್ಟ್‍ಗಳ ನಡುವೆ 9 ದಿನಗಳ ಅಂತರವಿತ್ತು ಎಂಬುದನ್ನು ಮರೆಯಬೇಡಿ. ಹೀಗಿದ್ದರೂ ರಾಂಚಿ ಟೆಸ್ಟ್‍ನಲ್ಲಿ 23 ಓವರ್ ಮಾಡಿದ್ದರಿಂದ ಬುಮ್ರಾ ದಣಿದಿದ್ದರು ಎಂದು ಭಾವಿಸಿ ವಿಶ್ರಾಂತಿ ನೀಡಿದ್ದು ಸರಿಯೇ? ಅಲ್ಲದೆ 4ನೇ ಟೆಸ್ಟ್ ಪಂದ್ಯದ ನಂತರ 8 ದಿನಗಳ ವಿಶ್ರಾಂತಿ ಸಿಗುತ್ತದೆ ಎಂದು ಮೊದಲೇ ತಿಳಿದಿತ್ತು. ಅಂತಿಮ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದು ಫಿಟ್ನೆಸ್ ಪಡೆದು ದೇಶದ ಪರ ಆಡಲು ಇಷ್ಟು ಸಮಯ ಸಾಕಲ್ಲವೇ ಎಂದು ಲಿಟ್ಲ್‍ಮಾಸ್ಟರ್ ಪ್ರಶ್ನಿಸಿದ್ದಾರೆ.
ರಾಂಚಿಯಲ್ಲಿ ನಡೆದಿದ್ದ 4ನೇ ಟೆಸ್ಟ್ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳಲು ನಿರ್ಣಯವಾಗಿತ್ತು. ಒಂದು ವೇಳೆ ಇಂಗ್ಲೆಂಡ್ ಆ ಪಂದ್ಯವನ್ನು ಜಯಿಸಿದ್ದರೆ, ಸರಣಿ ಗೆಲ್ಲಲು 5ನೇ ಪಂದ್ಯವು ನಿರ್ಣಾಯಕವಾಗುತ್ತಿತ್ತು. ಎನ್‍ಸಿಎ ಅಥವಾ ಜಸ್‍ಪ್ರೀತ್ ಬುಮ್ರಾ ಅವರು ರಾಂಚಿ ಟೆಸ್ಟ್‍ನಿಂದ ವಿಶ್ರಾಂತಿ ಪಡೆಯುವ ನಿರ್ಧಾರವನ್ನು ಪಡೆದುಕೊಂಡಿದ್ದರೂ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಇದಕ್ಕೆ ಸಮ್ಮತಿ ಸೂಚಿಸಬಾರದಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ರೋಹಿತ್‍ಶರ್ಮಾ ಪಡೆ 3-1 ರಿಂದ ಕೈವಶಪಡಿಸಿಕೊಂಡಿದ್ದು 5ನೇ ಪಂದ್ಯವು ಧರ್ಮಶಾಲಾದಲ್ಲಿ ಮಾರ್ಚ್ 7 ರಿಂದ ಆರಂಭಗೊಳ್ಳಲಿದ್ದು ಸರಣಿಯ ಅಂತರವನ್ನು 4-1ಕ್ಕೆ ಹೆಚ್ಚಿಸಿಕೊಳ್ಳಲು ಟೀಮ್ ಇಂಡಿಯಾ ಎದುರು ನೋಡುತ್ತಿದ್ದರೆ. ಅಂತರವನ್ನು 3-2ಕ್ಕೆ ಕುಗ್ಗಿಸಲು ಬೆನ್‍ಸ್ಟೋಕ್ಸ್ ಪಡೆ ಪಣ ತೊಟ್ಟಿದೆ.