Wednesday, April 24, 2024
Homeರಾಷ್ಟ್ರೀಯತ.ನಾಡು ಸಚಿವ ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ ಛೀಮಾರಿ

ತ.ನಾಡು ಸಚಿವ ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ ಛೀಮಾರಿ

ನವದೆಹಲಿ,ಮಾ.4-ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಕರೆ ಕೊಟ್ಟಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್‍ಗೆ ಛೀಮಾರಿ ಹಾಕಿರುವ ಸುಪ್ರೀಂಕೋರ್ಟ್, ನೀವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ಕಟು ಶಬ್ದಗಳಿಂದ ಟೀಕಾ ಪ್ರಹಾರ ನಡೆಸಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠ, ಸ್ಟಾಲಿನ್ ಸಚಿವ ರಾಗಿದ್ದು, ಅವರ ಹೇಳಿಕೆಯ ಪರಿಣಾಮ ಗಳನ್ನು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿತು. ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ನಿರ್ಮೂಲನೆ ಹೇಳಿಕೆಗೆ ಸಂಬಂಧಿಸಿದಂತೆ ಅವರು ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಂಡ ನಂತರ ಸುಪ್ರೀಂಕೋರ್ಟ್‍ಗೆ ಏಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಶ್ನೆ ಮಾಡಿದೆ.

ನೀವು ಸಂವಿಧಾನದ ಆರ್ಟಿಕಲ್ 19(1)(ಎ) ಅಡಿಯಲ್ಲಿ ನಿಮ್ಮ ಹಕ್ಕನ್ನು ದುರು ಪಯೋಗಪಡಿಸಿಕೊಳ್ಳುತ್ತೀರಿ. ಆರ್ಟಿಕಲ್ 25ರ ಡಿ ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ. ಈಗ ನೀವು ಆರ್ಟಿಕಲ್ 32ರಡಿಯಲ್ಲಿ (ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲು) ನಿಮ್ಮ ಹಕ್ಕನ್ನು ಚಲಾಯಿಸುತ್ತಿದ್ದೀರಾ? ಎಂದು ಸ್ಟಾಲಿನ್ ಪರ ವಕೀಲರನ್ನು ಪ್ರಶ್ನಿಸಿತು.

ಉದಯನಿಧಿ ಸ್ಟಾಲಿನ್ ಸಚಿವರಾಗಿದ್ದು, ಅವರು ತಾವು ಹೇಳಿದ್ದರ ಪರಿಣಾಮ ಏನು ಗೊತ್ತಾ?, ನೀವು ಸಾಮಾನ್ಯರಲ್ಲ, ನೀವು ಮಂತ್ರಿಯಾಗಿದ್ದೀರಿ, ಅದರ ಪರಿಣಾಮಗಳನ್ನು ನೀವೇ ತಿಳಿದುಕೊಳ್ಳಬೇಕು ಎಂದು ಹೇಳಿ, ಮಾರ್ಚ್ 15ಕ್ಕೆ ಪ್ರಕರಣವನ್ನು ಮುಂದೂಡಿತು. ಸ್ಟಾಲಿನ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಅರ್ನಾಬ್ ಗೋಸ್ವಾಮಿ, ಮೊಹಮ್ಮದ್ ಜುಬೇರ್ ಮತ್ತು ಇತರರ ಪ್ರಕರಣಗಳ ತೀರ್ಪನ್ನು ಉಲ್ಲೇಖಿಸಿ ಎಫ್‍ಐಆರ್‍ಗಳನ್ನು ಸೇರಿಸಲು ವಾದ ಮಂಡನೆ ಮಾಡಿದರು. ನಂತರ ನೀವು ಅಗತ್ಯವಿದ್ದರೆ ಹೈಕೋರ್ಟ್‍ಗೆ ಹೋಗಬಹುದೆಂದು ದ್ವಿಸದಸ್ಯರ ಪೀಠ ಸಲಹೆ ನೀಡಿದರು.

ಆಗ ಅಭಿಷೇಕ್ ಮನುಸಿಂಘ್ವಿ, ನಾನು ಅನೇಕ ನ್ಯಾಯಾಲಯಗಳಿಗೆ ಹೋಗಬೇಕಾದರೆ, ನಾನು ಇದರಲ್ಲಿ ಬಂಧಿಸಲ್ಪಡುತ್ತೇನೆ. ಇದು ಪ್ರಾಸಿಕ್ಯೂಷನ್‍ಗೆ ಮುಂಚಿತವಾಗಿ ಕಿರುಕುಳ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಮುಂದಿನ ವಾರ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿತು.
ತಮಿಳುನಾಡು ಮುಖ್ಯಮಂತ್ರಿ ಮತ್ತು ಆಡಳಿತಾರೂಢ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರ ಪುತ್ರರಾಗಿರುವ ಉದಯನಿಧಿ ಸ್ಟಾಲಿನ್ ಅವರು ಪ್ರಸ್ತುತ ಯುವಕಲ್ಯಾಣ, ಕ್ರೀಡಾಭಿವೃದ್ಧಿ ಸಚಿವರಾಗಿದ್ದಾರೆ.

ಕಳೆದ 2023ರ ಸೆಪ್ಟೆಂಬರ್‍ನಲ್ಲಿ ನಡೆದ ಸಮಾವೇಶದಲ್ಲಿ ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಹೀಗಾಗಿ ಇದನ್ನು ನಿರ್ಮೂಲನೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಒಂದು ಹಂತದಲ್ಲಿ ನಾಲಿಗೆ ಹರಿಬಿಟ್ಟಿದ್ದ ಉದಯನಿ ಸ್ಟಾಲಿನ್ ಸನಾತನ ಧರ್ಮವನ್ನು ಏಡ್ಸ್, ಮಲೇರಿಯಾ, ಕೊರೊನಾ ವೈರಸ್‍ಗೆ ಹೋಲಿಸಿದ್ದರು. ಇದು ದೇಶಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿತ್ತು.

RELATED ARTICLES

Latest News