ಗುಬ್ಬಿ, ಅ.10- ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅವಶ್ಯ ಜಲ್ಲಿ ಕಲ್ಲುಗಳ ನಡುವೆ ಉಳಿದಿದ್ದ ಜೀವಂತ ಜೆಲಟಿನ್ ಕಡ್ಡಿ ಬಗ್ಗೆ ಅರಿಯದ ವಿದ್ಯಾರ್ಥಿಯೊಬ್ಬ ಕುತೂಹಲದಲ್ಲಿ ಜೆಲಟಿನ್ ಕಡ್ಡಿ ಮುಟ್ಟಿ ಸ್ಫೋಟ ಉಂಟಾಗಿ ವಿದ್ಯಾರ್ಥಿ ಕೈ ಬೆರಳುಗಳು ತುಂಡಾಗಿ ಆಸ್ಪತ್ರೆಗೆ ದಾಖಲಾದ ಆತಂಕದ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ನಡೆದಿದೆ.
ಇಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಸರಾ ರಜೆ ಹಿನ್ನಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸ್ಪೆಷಲ್ ಕ್ಲಾಸ್ ಗಾಗಿ ಆಗಮಿಸುತ್ತಿದ್ದ ಸಮಯದಲ್ಲಿ ಇಡಗೂರು ಗ್ರಾಮದ ವಿದ್ಯಾರ್ಥಿ ಮೋನಿಶ್ ಗೌಡ(15) ಕಲ್ಲು ಬಂಡೆ ಚೂರುಗಳ ಮಧ್ಯೆ ಕಂಡ ವೈರ್ ಸಹಿತ ಇದ್ದ ಜೆಲಟಿನ್ ಕಡ್ಡಿ ಕಂಡು ಕುತೂಹಲದಿಂದ ತೆಗೆದುಕೊಂಡು ಶಾಲಾ ಆವರಣದಲ್ಲಿ ತೆರಳಿದ ನಂತರ ಬಿಸಿಯಾದ ಅನುಭವಕ್ಕೆ ಭಯಗೊಂಡು ಜೆಲಟಿನ್ ಕಡ್ಡಿ ಎಸೆಯುವ ಮುಂದಾದಾಗ ಸ್ಫೋಟಗೊಂಡು ಬಲಗೈ ಬೆರಳುಗಳು ತುಂಡಾಗಿದೆ.
ಸುಮಾರು ಒಂದು ಕಿಮೀ ಸುತ್ತಳತೆಯಲ್ಲಿ ಇಡೀ ಗ್ರಾಮಕ್ಕೆ ಕೇಳಿಸಿದ ಸ್ಫೋಟದ ಶಬ್ದ ಇಡೀ ಗ್ರಾಮಸ್ಥರಿಗೆ ಆತಂಕ ತಂದಿದೆ.ಇಡಗೂರು ಗ್ರಾಮ ಪಂಚಾಯಿತಿ ಮೂಲಕ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಕೆಲಸ ಆರಂಭಿಸಿ ಅಲ್ಲಿನ ಹಳ್ಳ ಮುಚ್ಚಲು ಬೆಳ್ಳೂರು ಕ್ರಾಸ್ ಸಮೀಪದಿಂದ ತಂದ ಬಂಡೆ ಕಲ್ಲುಗಳ ರಾಶಿಯಲ್ಲಿ ವೈರ್ ಸಹಿತ ಜೆಲಟಿನ್ ಕಡ್ಡಿಗಳು ಕಾಣುತ್ತಿದ್ದು, ಈ ಬಂಡೆ ಕಲ್ಲುಗಳ ಮಧ್ಯೆ ಕಾಣುವ ವೈರ್ ಕುತೂಹಲದಲ್ಲಿ ಬಾಲಕ ಮುಟ್ಟಿದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕೂಡಲೇ ಸ್ಪೆಷಲ್ ಕ್ಲಾಸ್‌ಗಾಗಿ ಆಗಮಿಸಿದ್ದ ಮಕ್ಕಳು, ಶಿಕ್ಷಕರು ಆತಂಕದಲ್ಲಿ ಮುಳುಗಿದರು. ಭಯದ ವಾತಾವರಣ ಮಧ್ಯೆ ಕೂಡಲೇ ಗಾಯಾಳು ವಿದ್ಯಾರ್ಥಿಯನ್ನು ತುಮಕೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಯಿತು.
ಸ್ಥಳಕ್ಕೆ ಆಗಮಿಸಿದ ಸಿಪಿಐ ಗೋಪಿನಾಥ್ ತಕ್ಷಣ ಘಟನೆ ನಡೆದ ಸ್ಥಳ ಪರಿಶೀಲಿಸಿ ಇನ್ನೂ ಜೀವಂತ ಜೆಲಟಿನ್ ಕಡ್ಡಿ ಇರುವ ಬಗ್ಗೆ ಖಚಿತ ಮಾಡಿಕೊಂಡು ಕೂಡಲೇ ಈ ಕಲ್ಲು ರಾಶಿ ಸುತ್ತಲಿನ ನೂರು ಮೀಟರ್ ನಿರ್ಬಂಧಿಸಿ ಮರಳು ತಂದು ಜೆಲಟಿನ್ ಕಡ್ಡಿ ಕಂಡ ಎಲ್ಲಾ ಕಲ್ಲು ಬಂಡೆ ರಾಶಿಯನ್ನು ಸುರಕ್ಷಿತಗೊಳಿಸಿದರು.
ಸ್ಥಳೀಯ ಪಂಚಾಯಿತಿ ಸದಸ್ಯ ಸುಶಾಂತಗೌಡ ಈ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ತಿಳಿದು ಪೊಲೀಸರು ಕೂಡಲೇ ಸ್ಥಳಕ್ಕೆ ಬರಲು ಸೂಚಿಸಿ ಗಾಯಾಳು ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನಡೆಸಲು ಸೂಚಿಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡರು.
ಸ್ಥಳಕ್ಕೆ ಭೂ ಮತ್ತು ಗಣಿಗಾರಿಕೆ ಉಪ ನಿರ್ದೇಶಕ ಲೋಕೇಶ್ ಕುಮಾರ್ ಹಾಗೂ ಭೂ ವಿಜ್ಞಾನಿ ಸಂತೋ್ ಕುಮಾರ್ ಜೆಲಟಿನ್ ಕಡ್ಡಿ ಬಗ್ಗೆ ಪರಿಶೀಲನೆ ನಡೆಸಿದರು. ತಾಪಂ ಇಓ ಶಿವಪ್ರಕಾಶ್, ಕಂದಾಯ ನಿರೀಕ್ಷಕಿ ಪ್ರಮೀಳಾ, ಗ್ರಾಮ ಲೆಕ್ಕಿಗ ಅಭಿಷೇಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.