ಬೆಂಗಳೂರು,ಮಾ.22- ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ಕೊಡಲಾಗಿದೆ. ಅದೇ ರೀತಿ ನನ್ನ ಕುಟುಂಬಕ್ಕೂ ಅವಕಾಶ ನೀಡಿ ಎಂದು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಇಂದು ಬೆಳಗ್ಗೆ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
30-40 ವರ್ಷದಿಂದ ನಾನು ಪಕ್ಷ ಕಟ್ಟಿದ್ದೇನೆ. ಆಕಸ್ಮಿಕವಾಗಿ ಕಳೆದ ಬಾರಿ ಸೋಲಾಗಿದೆ. ಮತ್ತೆ ಗೆದ್ದು ಕೋಲಾರ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ಈ ಕಾರಣಕ್ಕಾಗಿ ಅವರು ನನ್ನ ಕುಟುಂಬಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಇದು ಒಬ್ಬ ವ್ಯಕ್ತಿ ಅಥವಾ ಒಂದು ಕ್ಷೇತ್ರದ ಪ್ರಶ್ನೆಯಲ್ಲ. ನನ್ನ ಸಮುದಾಯ ರಾಜ್ಯಾದ್ಯಂತ ಇದೆ.
ಅವಕಾಶ ತಪ್ಪಿಸಿದರೆ ಸಮುದಾಯಕ್ಕೆ ಉತ್ತರ ಕೊಡಬೇಕಾಗುತ್ತದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಕೋಲಾರದಲ್ಲಿ ನನ್ನನ್ನು ಸೋಲಿಸಿದರು. ಅದು ಒಂದು ಘಟ್ಟ. ಅದರ ನಂತರ ನಾನು ದೇವನಹಳ್ಳಿಯಲ್ಲಿ ಸ್ಪರ್ಧೆ ಮಾಡುವ ಮುಂಚೆ ಸುದ್ದಿಗೋಷ್ಟಿ ನಡೆಸಿ ಜಿಲ್ಲೆಯ ಕಾಂಗ್ರೆಸ್‍ನ ಎಲ್ಲ ಅಭ್ಯರ್ಥಿಗಳು ಗೆಲ್ಲಬೇಕೆಂದು ಹೇಳಿಕೆ ನೀಡಿದ್ದೆ.
ರಮೇಶ್‍ಕುಮಾರ್ ಕೂಡ ಗೆಲ್ಲಬೇಕೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಹೌದು ಅವರು ಗೆಲ್ಲಬೇಕು ಎಂದು ಕರೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅನಿವಾರ್ಯವಾಗಿ ಅವರು ಸೋಲು ಕಂಡರು. ಟಿಕೆಟ್ ನೀಡುವ ವಿಚಾರದಲ್ಲಾಗಲಿ ಅಥವಾ ಸಚಿವರನ್ನಾಗಿ ಮಾಡುವ ಸಂಬಂಧವಾಗಲಿ ನಾನು ಯಾರಿಗೂ ಅಡ್ಡಗಾಲು ಹಾಕಲಿಲ್ಲ ಎಂದು ಸ್ಪಷ್ಟಪಡಿಸಿದರು.