ಬೆಂಗಳೂರು,ಅ.15- ಬಿಲ್ಡರ್‌ವೊಬ್ಬರ ಮನೆಯ ಸೆಲ್ಲರ್‌ನ ಗ್ರಿಲ್ ಒಡೆದು ಆ ಮೂಲಕ ಒಳಗೆ ನುಗ್ಗಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಕಾರು ಚಾಲಕರನ್ನು ವಿವಿಪುರಂ ಠಾಣೆ ಪೊಲೀಸರು ಬಂಧಿಸಿ 1.22 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ಕೇಶವ ಪಾಟೀಲ(37) ಮತ್ತು ನಿತಿನ್ ಉತ್ತಮ್ ಕಾಳೆ(31) ಬಂಧಿತ ಆರೋಪಿಗಳು. ಚಾಮರಾಜಪೇಟೆಯ ಬಿಲ್ಡರ್‌ವೊಬ್ಬರು ವ್ಯವಹಾರದ ನಿಮಿತ್ತ ಕೇರಳಕ್ಕೆ ಹೋಗಿದ್ದು, ಅವರ ಪತ್ನಿ ಹಾಗೂ ತಂದೆ ಅಂದೇ ಮಗಳ ಮನೆಗೆ ಹೋಗಿದ್ದಾಗ ಕಳ್ಳರು ಮನೆಯ ಸೆಲ್ಲರ್‌ನಲ್ಲಿರುವ ಗ್ರಿಲ್ ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಸುಮಾರು 2 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ, ಈ ಮನೆಯಲ್ಲಿ ಈ ಹಿಂದೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇಶವ ಪಾಟೀಲ್ ಸೇರಿದಂತೆ ಇಬ್ಬರನ್ನು ಮಹಾರಾಷ್ಟ್ರದ ಸತಾರ ಜಿಲ್ಲೆಯ ಗೋಂದಲಿ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಕಳವು ಮಾಡಿದ ಆಭರಣಗಳನ್ನು ಒಬ್ಬ ಆರೋಪಿಯು ಜಕ್ಕೂರಿನಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಬಚ್ಚಿಟ್ಟಿ ದ್ದನು. ಪೊಲೀಸರು ಆರೋಪಿಯ ಅಕ್ಕನ ಮನೆಯಿಂದ 55 ಲಕ್ಷ ಮೌಲ್ಯದ 652 ಗ್ರಾಂ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಬ್ಬ ಆರೋಪಿಯು ಸಹ ಕಳವು ಮಾಡಿದ್ದ ಆಭರಣಗಳನ್ನು ಮಹಾರಾಷ್ಟçದ ನವೀ ಮುಂಬೈನಲ್ಲಿರುವ ಅಕ್ಕನ ಮನೆ ಹಾಗೂ ಕೊಲ್ಲಾಪುರದಲ್ಲಿನ ಸೊಂಡೊಲಿ ಗ್ರಾಮದ ಸ್ನೇಹಿತನ ಮನೆಯಲ್ಲಿ ಇಟ್ಟಿದ್ದನು.
ಆರೋಪಿಯ ಮಾಹಿತಿ ಮೇರೆಗೆ 28.30 ಲಕ್ಷ ಮೌಲ್ಯದ 354 ಗ್ರಾಂ ಚಿನ್ನದ ಆಭರಣಗಳನ್ನು ಆರೋಪಿಯ ಅಕ್ಕನ ಮನೆಯಿಂದ ಹಾಗೂ 39.48 ಲಕ್ಷ ಮೌಲ್ಯದ 564 ಗ್ರಾಂ ಚಿನ್ನದ ಆಭರಣಗಳನ್ನು ಸ್ನೇಹಿತನ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ ಈ ಪ್ರಕರಣದಲ್ಲಿ 1 ಕೋಟಿ 22 ಲಕ್ಷದ 78 ಸಾವಿರ ಮೌಲ್ಯದ ಒಂದು ಕೆಜಿ 570 ಗ್ರಾಂ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಇನ್‌ಸ್ಪೆಕ್ಟರ್ ಧರ್ಮೇಂದ್ರ ಹಾಗೂ ಸಿಬ್ಬಂದಿ ತಂಡ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.