ಬೆಂಗಳೂರು,ಮೇ19- ವಿದೇಶಗಳಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಐವರನ್ನು ಬಂಧಿಸಿರುವ ಕಸ್ಟಮ್ಸೌ ಅಧಿಕಾರಿಗಳು, 2.55 ಕೋಟಿ ಮೌಲ್ಯದ 3642.36 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿದಾಗ ಆತನ ಬಳಿ 59.3 ಲಕ್ಷ ಮೌಲ್ಯದ 24 ಕ್ಯಾರೆಟ್‌ನ 828 ಗ್ರಾಂ ಚಿನ್ನ ಇರುವುದು ಕಂಡುಬಂದಿದೆ. ಕೂಡಲೇ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರನ್ನು ತಪಾಸಣೆ ನಡೆಸಿದ ಕಸ್ಟಮ್ ಅಧಿಕಾರಿಗಳು, 1.96 ಕೋಟಿ ರೂ. ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದುಬೈನಿಂದ ಬಂದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯ ತಪಾಸಣೆ ನಡೆಸಿದಾಗ ಜೀನ್ಸ್ ಪ್ಯಾಂಟ್ ಹಾಗೂ ಟೀಶರ್ಟ್‌ಗಳಲ್ಲಿ 2814.36 ಗ್ರಾಂನ ಪೇಸ್ಟ್ ರೀತಿಯ ಚಿನ್ನವನ್ನು ಅಡಗಿಸಿಟ್ಟುಕೊಂಡಿರುವುದು ಪತ್ತೆಯಾಗಿದೆ. ಈ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.