ಬೆಂಗಳೂರು,ನ.21- ವ್ಯಾಪಕ ಟೀಕೆಗಳಿಗೆ ಗುರಿಯಾದ ಬಳಿಕ ರಾಜ್ಯಸರ್ಕಾರ ಎಚ್ಚೆತ್ತುಕೊಂಡಿದ್ದು ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರ ಕಾರ್ಡ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾರ್ಡ್‌ಗಳು ಯಥಾಸ್ಥಿತಿಯಲ್ಲೇ ಮುಂದುವರೆಯಲಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಪರಿಷ್ಕರಣೆಗೆ ಒಳಪಟ್ಟು, ಅಮಾನತುಗೊಂಡಿರುವ ಕಾರ್ಡ್‌ಗಳನ್ನು ಇನ್ನೊಂದು ವಾರದೊಳಗಾಗಿ ಮರುಸ್ಥಾಪಿಸಿ ಅಕ್ಕಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಬಡವರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದರು.
ಪಾನ್‌ಕಾರ್ಡ್ ಆಧರಿತ ಪರಿಶೀಲನೆಯ ವೇಳೆ ಕೆಲವರು ಆದಾಯ ತೆರಿಗೆ ಪಾವತಿಗೆ ವಿಳಂಬವಾಗಿ ದಂಡ ವಿಧಿಸಿಕೊಂಡಿದ್ದಾರೆ. ಅಲ್ಲಿಗೆ ಅವರು ಆದಾಯ ತೆರಿಗೆ ಪಾವತಿದಾರರು ಎಂಬುದು ಖಚಿತವಾಗಿದೆ. ಇನ್ನು ಕೆಲವರು ಸರ್ಕಾರಿ ನೌಕರರಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರವೇ 2 ತಿಂಗಳಿನಿಂದ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ಆರಂಭಿಸಿತ್ತು. ಈವರೆಗೂ 3.81 ಲಕ್ಷ ಕಾರ್ಡ್‌ಗಳನ್ನು ಪರಿಷ್ಕರಿಸಲಾಗಿತ್ತು ಎಂದರು.
ಒಟ್ಟು ಪರಿಷ್ಕರಣೆಯಾದ ಕಾರ್ಡ್‌ಗಳಲ್ಲಿ 98,483 ಕಾರ್ಡ್‌ದಾರರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದು, 4,036 ಕಾರ್ಡ್‌ದಾರರು ಸರ್ಕಾರಿ ನೌಕರರಾಗಿದ್ದಾರೆ. ಈ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಉಳಿದಂತೆ ಯಾವುದೇ ಕಾರ್ಡ್‌ಗಳು ರದ್ದುಗೊಳ್ಳದೆ 2 ತಿಂಗಳ ಮೊದಲಿದ್ದಂತೇ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಕಾರ್ಡ್‌ಗಳನ್ನು ಒಂದು ವಾರದೊಳಗಾಗಿ ಲಾಗಿನ್‌ಗೆ ಒಳಪಡಿಸಿ ಮುಂದಿನ ವಾರದಿಂದ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಸದ್ಯಕ್ಕೆ ಕಾರ್ಡ್‌ಗಳ ಪರಿಷ್ಕರಣೆಯನ್ನು ಕೈಬಿಡಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಾರ್ಡ್‌ಗಳೂ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆೆ. ಮುಂದಿನ ದಿನಗಳಲ್ಲಿ ಪರಿಷ್ಕರಣೆಗೆ ಒಳಪಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.
ಮಹಾರಾಷ್ಟ್ರ ಹೊರತುಪಡಿಸಿದರೆ ಕರ್ನಾಟಕ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುವ 2ನೇ ರಾಜ್ಯವಾಗಿದೆ. ಆದರೂ ಇಲ್ಲಿ ಬಿಪಿಎಲ್ ಕಾರ್ಡ್‌ಗಳ ಪ್ರಮಾಣ ಶೇ.66 ರಷ್ಟಿದೆ. ಬೇರೆ ಯಾವ ರಾಜ್ಯಗಳಲ್ಲೂ ಬಿಪಿಎಲ್ ಕಾರ್ಡ್ ಪ್ರಮಾಣ ಶೇ.50 ದಾಟಿಲ್ಲ. ಆದರೆ ಇದು ನಮಲ್ಲಿ ಹೆಚ್ಚಿರುವ ಕಾರಣ ಪರಿಷ್ಕರಣೆ ಮಾಡಲು 2 ತಿಂಗಳ ಹಿಂದೆ ನಿರ್ಧರಿಸಲಾಯಿತು.
ಅಧಿಕಾರಿಗಳು ಹಗಲೂ-ರಾತ್ರಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಪ್ಯಾನ್‌ಕಾರ್ಡ್ ಆಧರಿಸಿ ಪರಿಷ್ಕರಣೆ ನಡೆದಿದೆ. ಶೇ.1 ಅಥವಾ 2 ರಷ್ಟು ಗೊಂದಲಗಳಾಗಿವೆ. ಅರ್ಹರ ಕಾರ್ಡ್‌ಗಳು ಧಕ್ಕೆಗೊಳಗಾಗಿರಬಹುದು. ಏನೇ ಲೋಪಗಳಾಗಿದ್ದರೂ ಅದನ್ನು ಸರಿಪಡಿಸಲಾಗುವುದು ಮತ್ತು ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕೂಡ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಮಾಡಿದ್ದು, 5.08 ಕೋಟಿ ಕಾರ್ಡ್‌ಗಳನ್ನು ರದ್ದು ಮಾಡಿದೆ. ರಾಜ್ಯದಲ್ಲಿ 8,647 ಕಾರ್ಡ್‌ಗಳನ್ನು ಅಮಾನತುಗೊಳಿಸಲಾಗಿದೆ. 59,379 ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲೂ 16,806 ಕಾರ್ಡ್‌ಗಳನ್ನು ಬಿಪಿಎಲ್ ಆಗಿಯೇ ಮತ್ತೆ ಮುಂದುವರೆಸಲಾಗಿದೆ ಎಂದರು.
ರಾಜ್ಯದಲ್ಲಿ ಅಂತ್ಯೋದಯ ಅನ್ನಯೋಜನೆಯಡಿ 10,68,028 ಕಾರ್ಡ್‌ಗಳಿವೆ. ಬಿಪಿಎಲ್ ಕಾರ್ಡ್‌ಗಳು 1,02,44,435 ಇವೆರಡೂ ಸೇರಿ 1,13,12,463 ಕಾರ್ಡ್‌ಗಳಿವೆ. ರಾಜ್ಯಸರ್ಕಾರ 11,84,425 ಕಾರ್ಡ್‌ಗಳನ್ನು ನೀಡಿದೆ. ಕೇಂದ್ರ, ರಾಜ್ಯ ಸರ್ಕಾರ ನೀಡಿರುವುದು ಹಾಗೂ ಅಂತ್ಯೋದಯ ಅನ್ನ ಯೋಜನೆಯಡಿ 1,24,97,088 ಕಾರ್ಡ್‌ಗಳನ್ನು ನೀಡಲಾಗಿದೆ. ಆದ್ಯತೆ ಇರುವ ಕುಟುಂಬಗಳಿಗೆ (ಎಪಿಎಲ್) 25,62,343 ಕಾರ್ಡ್‌ಗಳಿವೆ. ರಾಜ್ಯದಲ್ಲಿ ಒಟ್ಟಾರೆ 1,50,59,431 ಕಾರ್ಡ್‌ಗಳಿದ್ದು, ಇದರಲ್ಲಿ 1,02,509 ಕಾರ್ಡ್‌ಗಳನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ. ಉಳಿದಂತೆ ಎಲ್ಲಾ ಕಾರ್ಡ್‌ಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ ಎಂದರು.
ಕಳೆದ 2 ವರ್ಷಗಳಿಂದ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದವು. ಅವುಗಳನ್ನು ಪರಿಷ್ಕರಿಸಿ 2,69,536 ಮಂದಿಗೆ ಕಾರ್ಡ್ ನೀಡಿದ್ದು, ಅಕ್ಕಿ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಶೇ.66 ರಷ್ಟು ಬಿಪಿಎಲ್ ಕಾರ್ಡ್‌ಗಳಿದ್ದರೂ ಮತ್ತಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯಕ್ಕೆ ಸ್ಥಗಿತಗೊಂಡಿರುವ ಪರಿಷ್ಕರಣೆ ಕಾರ್ಯವನ್ನು ಮತ್ತೆ ಕೈಗೊಂಡು ಎಲ್ಲವನ್ನೂ ಸರಿಪಡಿಸಿದ ಬಳಿಕ ಹೊಸ ಕಾರ್ಡ್‌ಗಳ ಪರಿಶೀಲನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಚಿವರು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ತಿಂಗಳವರೆಗೆ ಹಣವನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ನಗದನ್ನು ಒಂದು ವಾರದೊಳಗಾಗಿ ಬಿಡುಗಡೆ ಮಾಡುವುದಾಗಿ ಹೇಳಿದರು.