Thursday, September 19, 2024
Homeರಾಜ್ಯಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧ : ಸಿಎಂ ಸಿದ್ದರಾಮಯ್ಯ

ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧ : ಸಿಎಂ ಸಿದ್ದರಾಮಯ್ಯ

Government committed to implement internal reservation: CM Siddaramaiah

ಬೆಂಗಳೂರು, ಆ.28– ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ತಾವು ಬದ್ಧರಾಗಿದ್ದು, ಹೈಕಮಾಂಡ್‌ ಜೊತೆ ಚರ್ಚಿಸಿ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ತಮ ನಿವಾಸ ಕಾವೇರಿಯಲ್ಲಿಂದು ಮಾದಿಗ ಸಮುದಾಯದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ಅವರು, ಒಳಮೀಸಲಾತಿ ವಿಚಾರವಾಗಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಅನುಸಾರ ನಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಳಮೀಸಲಾತಿ ವಿಚಾರವಾಗಿ ಹಲವು ದಿನಗಳಿಂದಲೂ ವಾದ-ವಿವಾದಗಳು ತೀವ್ರಗೊಂಡಿವೆ. ಈ ಹಿಂದೆ ಎಸ್‌‍.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಸಮಿತಿ ಚರ್ಚೆ ನಡೆಸಿ ವರದಿ ನೀಡಿತ್ತು. ಆದರೆ ಅದು ಅವೈಜ್ಞಾನಿಕ ಎಂಬ ಕಾರಣಕ್ಕೆ ಪ.ಜಾತಿಯಲ್ಲಿರುವ ಕೆಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದವು.

ಸದಾಶಿವ ಆಯೋಗದ ವರದಿ ಯನ್ನು ಜಾರಿಗೊಳಿಸಬೇಕೆಂದು ಮಾದಿಗ ಸಮುದಾಯ ಮೊದಲಿನಿಂದಲೂ ಪಟ್ಟು ಹಿಡಿದಿದೆ. ಕೆಲವು ಸಮುದಾಯಗಳು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದಾಗಿ ಎರಡು ದಶಕದಿಂದಲೂ ವಿವಾದ ನೆನೆಗುದಿಗೆ ಬಿದ್ದಿದೆ.

ಈ ಹಿಂದೆ ಬಿಜೆಪಿಯ ಬಸವರಾಜ ಬೊಮಾಯಿ ನೇತೃತ್ವದ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ತಿರಸ್ಕಾರ ಮಾಡಿತ್ತು.
ಆದರೆ ಅದರಲ್ಲಿನ ಶಿಫಾರಸ್ಸುಗಳನ್ನು ಪರಿಗಣಿಸಿ ಪರಿಶಿಷ್ಟ ಜಾತಿಯಲ್ಲಿರುವ ಎಡಗೈ ಸಮುದಾಯ, ಬಲಗೈ ಸಮುದಾಯ, ಬೋವಿ, ಲಂಬಾಣಿ ಹಾಗೂ ಇತರ ಜಾತಿಗಳಿಗೆ ಒಳಮೀಸಲಾತಿಯನ್ನು ಹಂಚಿಕೆ ಮಾಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಸಂವಿಧಾನ ತಿದ್ದುಪಡಿ ಮಾಡುವಂತೆಯೂ ಮನವಿ ಮಾಡಲಾಗಿತ್ತು.

ಈ ನಡುವೆ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಒಳಮೀಸಲಾತಿ ಬೇಡಿಕೆಗಳು ಕೇಳಿಬಂದಿದ್ದರಿಂದಾಗಿ ಪ್ರಕರಣ ಸುಪ್ರೀಂಕೋರ್ಟ್‌ನ ಅಂಗಳದಲ್ಲಿ ಇದೇ ತಿಂಗಳ ಆರಂಭದಲ್ಲಿ ತೀರ್ಪು ನೀಡಿರುವ ನ್ಯಾಯಾಲಯ ಒಳಮೀಸಲಾತಿ ನೀಡುವುದು ರಾಜ್ಯಸರ್ಕಾರದ ಬಾಧ್ಯತೆ ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಮತ್ತೊಮೆ ವಿವಾದ ಮುನ್ನೆಲೆಗೆ ಬಂದಿದೆ. ಎಡಗೈ ಸಮುದಾಯದ ಮುಖಂಡರೂ ಆಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ, ಅಬಕಾರಿ ಸಚಿವ ಆರ್‌.ಬಿ.ತಿಮಾಪುರ್‌, ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ, ಶಾಸಕರಾದ ಶ್ರೀನಿವಾಸ್‌‍, ಬಸವಂತಪ್ಪ, ಡಾ.ತಿಮಯ್ಯ, ಮಾಜಿ ಸಂಸದ ಶಿವಣ್ಣ ಸೇರಿದಂತೆ ಹಲವು ಪ್ರಮುಖ ಮುಖಂಡರ ಜೊತೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದರು. ಸಂಪುಟದಲ್ಲಿ ಚರ್ಚೆ ಮಾಡಿ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

RELATED ARTICLES

Latest News