Wednesday, March 12, 2025
Homeರಾಜ್ಯರನ್ಯಾರಾವ್‌ ಪ್ರಕರಣದ ಸಿಐಡಿ ತನಿಖೆ ಕೈಬಿಟ್ಟ ಸರ್ಕಾರ

ರನ್ಯಾರಾವ್‌ ಪ್ರಕರಣದ ಸಿಐಡಿ ತನಿಖೆ ಕೈಬಿಟ್ಟ ಸರ್ಕಾರ

Government drops CID probe into Ranya Rao case

ಬೆಂಗಳೂರು,ಮಾ.12– ರನ್ಯಾ ರಾವ್‌ ಪ್ರಕರಣದಲ್ಲಿ ಸಂಭಾವನೀಯ ಮುಜುಗರ ವನ್ನು ತಪ್ಪಿಸಿಕೊಳ್ಳಲು ಸಿಐಡಿ ತನಿಖೆಯನ್ನು ಕೈಬಿಡಲು ರಾಜ್ಯಸರ್ಕಾರ ನಿರ್ಧರಿಸಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ರನ್ಯಾ ರಾವ್‌ ಸಿಕ್ಕಿಬಿದ್ದ ಬಳಿಕ ಕೇಂದ್ರ ಮತ್ತು ರಾಜ್ಯಸರ್ಕಾರದ ಹಲವು ಸಂಸ್ಥೆಗಳು ಜಾಲದ ಬೆನ್ನು ಬಿದ್ದಿವೆ.

ವಿಮಾನನಿಲ್ದಾಣದಿಂದ ಚಿನ್ನವನ್ನು ಅಕ್ರಮವಾಗಿ ತೆಗೆದು ಕೊಂಡು ಹೋಗುವ ಪ್ರಯತ್ನ ದಲ್ಲಿದ್ದಾಗ ಕೇಂದ್ರ ಕಂದಾಯ ಗುಪ್ತಚರ ಇಲಾಖೆಯು (ಡಿಆರ್‌ಐ) ರನ್ಯಾರನ್ನು ಬಂಧಿಸಿತ್ತು.ಅದರ ಬೆನ್ನಲ್ಲೇ ಸಿಬಿಐ ಕಳ್ಳಸಾಗಾಣಿಕೆ ಕ್ರಿಮಿನಲ್‌ ಅಪರಾಧ ತನಿಖೆಗಾಗಿ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಿದೆ.

ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಕೂಡ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈ ನಡುವೆ ರನ್ಯಾ ರಾವ್‌ ಅವರ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದೆ ಎಂಬ ಆರೋಪಗಳು ಚರ್ಚೆಗೆ ಗ್ರಾಸವಾಗಿತ್ತು. ರನ್ಯಾರಾವ್‌ ರಾಜ್ಯದ ಪೊಲೀಸ್‌‍ ಮಹಾ ನಿರ್ದೇಶಕ ಹಾಗೂ ಪೊಲೀಸ್‌‍ ವಸತಿಗೃಹ ನಿಗಮದ ಅಧ್ಯಕ್ಷ ರಾಮಚಂದ್ರರಾವ್‌ ಅವರ ಮಲಪುತ್ರಿಯಾಗಿದ್ದು, ಆ ಪ್ರಭಾವ ಬಳಸಿ ವಿಮಾನನಿಲ್ದಾಣದಲ್ಲಿ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ತಪಾಸಣಾ ರಹಿತವಾಗಿ ಹೊರಬರುತ್ತಿದ್ದು, ಈ ಸಂದರ್ಭದಲ್ಲಿ ಚಿನ್ನ ಕೂಡ ತರುತ್ತಿದ್ದರು ಎಂದು ಹೇಳಲಾಗಿತ್ತು.

ಶಿಷ್ಟಾಚಾರ ಉಲ್ಲಂಘನೆಯ ಕುರಿತು ರಾಜ್ಯಸರ್ಕಾರ ಹಿರಿಯ ಐಎಎಸ್‌‍ ಅಧಿಕಾರಿ ಗೌರವ್‌ಗುಪ್ತ ಅವರ ನೇತೃತ್ವದಲ್ಲಿ ವಿಚಾರಣೆಗೆ ಆದೇಶಿಸಿತ್ತು.ರನ್ಯಾರಾವ್‌ ಪ್ರಕರಣದಲ್ಲಿ ಪೊಲೀಸ್‌‍ ಸಿಬ್ಬಂದಿಗಳಿಂದ ಲೋಪಗಳು ಆಗಿರುವ ಬಗ್ಗೆ ತನಿಖೆಗಾಗಿ ಸಿಐಡಿ ವಿಚಾರಣೆಗೂ ಆದೇಶಿಸಲಾಗಿತ್ತು. ಒಂದೇ ಪ್ರಕರಣದಲ್ಲಿ ಎರಡು ತನಿಖೆಗಳು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಈಗ ಸಿಐಡಿ ವಿಚಾರಣೆಯನ್ನು ಹಿಂಪಡೆಯಲಾಗಿದೆ.

ಮೂಲಗಳ ಪ್ರಕಾರ, ಚಿನ್ನ ಕಳ್ಳಸಾಗಾಣಿಕೆ ಹಗರಣದಲ್ಲಿ ರಾಜ್ಯದ ಪ್ರಭಾವಿಗಳ ಕೈವಾಡವಿದ್ದು, ತನಿಖೆ ಆರಂಭಿಸಿದರೆ ಭಾರೀ ಮುಜುಗರ ಉಂಟಾಗುತ್ತದೆ. ಈ ಹಿಂದೆ ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಎಸ್‌‍ಐಟಿ ತನಿಖೆ ನಡೆಸಿತ್ತು. ಈ ತನಿಖೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಬಂಧಿಸಿ ಹೊಣೆಗಾರರನ್ನಾಗಿ ಮಾಡಿತ್ತು. ಅತ್ತ ಕೇಂದ್ರ ತನಿಖಾ ಸಂಸ್ಥೆಯ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿ ಈ ಹಿಂದೆ ಸಚಿವರಾಗಿದ್ದ ನಾಗೇಂದ್ರ ಅವರನ್ನು ಬಂಧಿಸಿ ಜೈಲಿಗಟ್ಟಿತ್ತು
ಎಸ್‌‍ಐಟಿ ತನಿಖೆಯಲ್ಲಿ ನಾಗೇಂದ್ರ ಅವರ ಬಗ್ಗೆ ಉಲ್ಲೇಖವಾಗದೇ ಇರುವುದನ್ನು ವಿರೋಧಪಕ್ಷಗಳು ಪ್ರಶ್ನಿಸಿದ್ದವು. ಸರ್ಕಾರ ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡು, ಆರೋಪಿಗಳ ಅಧಿಕಾರಿಗಳ ತಲೆಗೆ ಕಟ್ಟಿ ನುಣುಚಿಕೊಳ್ಳುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಈಗ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಬಿಐ, ಡಿಆರ್‌ಐ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ.

ಕಳ್ಳ ಸಾಗಾಣಿಕೆಯ ಜಾಲದ ಮೂಲ ಒಂದು ವೇಳೆ ಪ್ರಭಾವಿಗಳ ಬುಡಕ್ಕೂ ಹೋಗಿ ನಿಂತರೆ ಕೇಂದ್ರ ತನಿಖಾ ಸಂಸ್ಥೆಗಳು ಮುಲಾಜಿಲ್ಲದೆ ಕ್ರಮ ಜರುಗಿಸುತ್ತವೆ. ರಾಜ್ಯಸರ್ಕಾರದ ಅಧೀನದಲ್ಲಿರುವ ಸಿಐಡಿ ವಿಮಾನನಿಲ್ದಾಣದಲ್ಲಿ ಶಿಷ್ಟಾಚಾರ ಉಲ್ಲಂಘನೆಗೆ ಮತ್ತು ಪೊಲೀಸ್‌‍ ಜೀಪ್‌ ಬಳಕೆಗೆ ಸೀಮಿತವಾಗಿ ತನಿಖೆ ನಡೆಸಿ ಕೆಳಹಂತದ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡುವ ಸಾಮರ್ಥ್ಯವೂ ಇದೆ.

ಉನ್ನತ ಮಟ್ಟದ ಪ್ರಭಾವಿಗಳ ವಿರುದ್ಧ ಸಿಐಡಿ ಕ್ರಮ ಕೈಗೊಳ್ಳುವುದು ಸುಲಭಸಾಧ್ಯವಲ್ಲ. ಕೇಂದ್ರಸರ್ಕಾರದ ತನಿಖಾ ಸಂಸ್ಥೆಗಳು ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಂಡು ರಾಜ್ಯದ ಅಧಿಕಾರಿಗಳು ಪ್ರಭಾವಿಗಳನ್ನು ಕೈಬಿಟ್ಟರೆ ಮತ್ತೊಮೆ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸಿಐಡಿ ತನಿಖೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES

Latest News