Friday, May 10, 2024
Homeರಾಜ್ಯಪಂಚತಾರಾ ಹೊಟೇಲ್‌ಗಳ ನಿರ್ಮಾಣಕ್ಕೆ ಮುಂದಾದ ಸರ್ಕಾರ

ಪಂಚತಾರಾ ಹೊಟೇಲ್‌ಗಳ ನಿರ್ಮಾಣಕ್ಕೆ ಮುಂದಾದ ಸರ್ಕಾರ

ಬೆಂಗಳೂರು,ನ.21- ಪ್ರತಿವರ್ಷ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗುತ್ತದೆ. ಇದೀಗ ಇಂಥ ಖರ್ಚು ಕಡಿಮೆಗೊಳಿಸುವುದು, ವಾಸ್ತವ್ಯದ ಅನಾನುಕೂಲತೆ, ವೆಚ್ಚವನ್ನು ತಗ್ಗಿಸಲು ಬೆಳಗಾವಿ ಸುವರ್ಣಸೌಧದ ಸಮೀಪದಲ್ಲೇ ಪಂಚತಾರಾ ಹೊಟೇಲ್ ನಿರ್ಮಿಸಲು ಸರ್ಕಾರ ಮುಂದಾಗಿದೆ.

ಡಿ.4ರಿಂದ ಡಿ.15ರವರೆಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಕಳೆದ ವರ್ಷ ನಡೆದ ಅಧಿವೇಶನಕ್ಕೆ ಅಂದಾಜು 37 ಕೋಟಿ ರೂ. ವೆಚ್ಚವಾಗಿತ್ತು. 2021ರಲ್ಲಿ ಸುಮಾರು 30 ಕೋಟಿ ರೂ. ಖರ್ಚು ಮಾಡಲಾಗಿತ್ತು. 2018ರಲ್ಲಿ 17 ಕೋಟಿ ರೂ. ಖರ್ಚಾಗಿತ್ತು. ವರ್ಷಂಪ್ರತಿ ಅಧಿವೇಶನದ ವೆಚ್ಚದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಒಟ್ಟು ಖರ್ಚಿನಲ್ಲಿ ಬಹುಪಾಲು ವಾಸ್ತವ್ಯದ್ದಾಗಿದೆ.

ಅಧಿವೇಶನದ ಎರಡು ವಾರಗಳ ಕಾಲ ಬೆಳಗಾವಿ ನಗರದ ಎಲ್ಲಾ ಹೊಟೇಲ್ ಹಾಗೂ ರೆಸಾರ್ಟ್‍ಗಳನ್ನು ಜಿಲ್ಲಾಡಳಿತ ಶಾಸಕರು, ಅಧಿಕಾರಿಗಳು, ಗಣ್ಯರ ವಾಸ್ತವ್ಯಕ್ಕಾಗಿ ವಶಕ್ಕೆ ಪಡೆಯುತ್ತದೆ. ಅಧಿವೇಶನದ ವೇಳೆ ಅಧಿಕಾರಿಗಳ ವರ್ಗ ಹಾಗೂ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ಸುಮಾರು 2000 ಹೊಟೇಲ್ ಕೊಠಡಿಗಳನ್ನು ಬುಕ್ ಮಾಡಲಾಗುತ್ತದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮರಾಠ ಮೀಸಲಾತಿ

2022ರಲ್ಲಿ ನಗರದ ಸುಮಾರು 80 ಹೊಟೇಲ್‍ಗಳನ್ನು ವಾಸ್ತವ್ಯಕ್ಕಾಗಿ ಬಳಸಲಾಗಿತ್ತು. ಶಾಸಕರು, ವಿಐಪಿಗಳು, ಅಧಿಕಾರಿಗಳ ವಾಸ್ತವ್ಯಕ್ಕಾಗಿ 67 ಐಷಾರಾಮಿ ಹೊಟೇಲ್‍ಗಳನ್ನು ಬಳಸಲಾಗುತ್ತದೆ. ಇದಕ್ಕಾಗಿ ಕಳೆದ ವರ್ಷ ಸುಮಾರು 6 ಕೋಟಿ ರೂ. ವೆಚ್ಚವಾಗಿದೆ. ಸರಾಸರಿ ಸರ್ಕಾರ ಶಾಸಕರ ವಾಸ್ತವ್ಯಕ್ಕೆ ಸುಮಾರು 10-12 ಲಕ್ಷ ರೂ. ಖರ್ಚು ಮಾಡುತ್ತದೆ. ಬೆಳಗಾವಿ ನಗರದಲ್ಲಿನ ಲಕ್ಸುರಿ ಹೊಟೇಲ್‍ಗಳು ಸುಮಾರು 20 ಲಕ್ಷ ರೂ.ನಿಂದ 70 ಲಕ್ಷ ರೂ.ವರೆಗೆ ಬಿಲ್ ಮಾಡುತ್ತವೆ ಎಂದು ತಿಳಿದುಬಂದಿದೆ.

ಸುವರ್ಣಸೌಧದ ಬಳಿ 10 ಎಕರೆ ಸರ್ಕಾರಿ ಜಮೀನಿನಲ್ಲಿ ಹೊಟೇಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಪಬ್ಲಿಕ್-ಪ್ರೈವೇಟ್ ಪಾಟ್ನರ್‍ಶಿಪ್ ಮಾದರಿಯಲ್ಲಿ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಜಮೀನು ಸರ್ಕಾರದ್ದಾಗಿದ್ದು, ಖಾಸಗಿಯವರು ಹೊಟೇಲ್ ನಿರ್ಮಿಸಲಿದ್ದಾರೆ. 30 ವರ್ಷಗಳ ಕಾಲ ಖಾಸಗಿಯವರಿಗೆ ಕಟ್ಟಡ ಗುತ್ತಿಗೆ ನೀಡುವ ಯೋಚನೆ ಇದೆ.

ಅಧಿವೇಶನ ವೇಳೆ ಈ ಹೊಟೇಲ್‍ನ್ನು ಶಾಸಕರು, ಅಧಿಕಾರಿಗಳು, ಗಣ್ಯರ ವಾಸ್ತವ್ಯಕ್ಕೆ ಬಳಸಲಾಗುವುದು. ಉಳಿದ ಅವಧಿಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿದೆ. ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ವಸತಿ ಹೊಟೇಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

RELATED ARTICLES

Latest News