ಬೆಂಗಳೂರು,ನ.17- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು. ಲೋಕೋಭಿರಾಮವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಭೇಟಿಯಾಗಿರಲಿಲ್ಲ. ವಯಸ್ಸಾದ ಸಂದರ್ಭದಲ್ಲಿ ನೀವು ತಪ್ಪು ಮಾಡಿದ್ದೀರಿ ಅನಿಸುತ್ತೆ ಎಂದು ಶಿವಕುಮಾರ್ ಹೇಳಿದರು. ಆದರೆ ನಾನು ಜೆಡಿಎಸ್‍ನಲ್ಲೇ ಚೆನ್ನಾಗಿದ್ದೇನೆ ಎಂದು ಹೇಳಿದ್ದೇನೆ.
ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್
ಜೆಡಿಎಸ್ ಬಿಜೆಪಿ ಜೊತೆ ಸದ್ಯಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದೇ ರೀತಿ ಮುಂದುವರೆಯಲಿದೆ ಎಂದು ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿ ಯವರನ್ನು ಪದೇ ಪದೇ ಆಕ್ಷೇಪಾರ್ಹವಾಗಿ ಮಾತನಾಡುವುದು ಸರಿಯಲ್ಲ. ನಾವು ಅದೇ ರೀತಿ ಅವರಿಗೆ ಹೇಳಿದರೆ ಸರಿಯಾಗುತ್ತದೆಯೇ ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ಭೇಟಿಯಾಗಿರುವುದಕ್ಕೆ ಏಕೆ ಬೇರೆ ಅರ್ಥ ಕಲ್ಪಿಸಬೇಕು ಎಂದು ಪ್ರಶ್ನಿಸಿದರು. ಜಿ.ಟಿ.ದೇವೇಗೌಡರು ಶಾಸಕರಾಗಿದ್ದು, ಅವರು ಯಾವುದೋ ಕೆಲಸಕ್ಕೆ ಭೇಟಿಯಾಗಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.