ಬೆಂಗಳೂರು,ಏ.28- ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ರಾಜ್ಯಸರ್ಕಾರ ವಿಶೇಷ ತನಿಖಾದಳಕ್ಕೆ ವಹಿಸಿರುವುದನ್ನು ಸ್ವಾಗತಿಸುವುದಾಗಿ ಜೆಡಿಎಸ್ ಕೋರ್‌ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತವೆ. ಅದರ ಭಾಗ ಇದೂ ಆಗಿರಬಹುದು. ಲೈಂಗಿಕ ದೌರ್ಜನ್ಯದ ಆರೋಪದ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ.
ರಾಜ್ಯಸರ್ಕಾರ ಎಸ್‌ಐಟಿಗೆ ವಹಿಸಿರುವುದನ್ನು ಸ್ವಾಗತಿಸುತ್ತೇವೆ. ಆರೋಪಕ್ಕೆ ಸಂಬಂಧಿಸಿದಂತೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಪೆನ್‌ಡ್ರೈವ್ ವಿಚಾರ ಅಥವಾ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ತಾವು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಕಾಂಗ್ರೆಸ್‌ನವರು ಈ ವಿಚಾರದಲ್ಲಿ ಪ್ರತಿಭಟನೆ ಮಾಡಿರುವುದು ಗಮನಕ್ಕೆ ಬಂದಿದೆ. ಸರ್ಕಾರವೂ ಅವರದ್ದೇ ಆಗಿದೆ, ಎಸ್‌ಐಟಿ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳೂ ಅವರ ಸರ್ಕಾರದ ಅಧೀನದಲ್ಲೇ ಇವೆ. ಯಾವುದೇ ರೀತಿಯ ತನಿಖೆ ನಡೆಸಲು ಕ್ರಮ ಕೈಗೊಂಡರೂ ಸ್ವಾಗತಿಸುವುದಾಗಿ ತಿಳಿಸಿದರು.