ಹಾಸನ,ಆ.16- ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಯಥಾಸ್ಥಿತಿಯಾಗಿ ಮುಂದುವರೆಯಲಿದೆ ಎಂದು ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಐದು ಗ್ಯಾರಂಟಿ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ ಸುರ್ಜಿವಾಲ ಸೇರಿದಂತೆ ಇತರೆ ಹೈಕಮಾಂಡ್ ನಾಯಕರು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದ್ದು ಗೊಂದಲ ಆಗದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ನಿರ್ದೇಶನ ನೀಡಿದ್ದಾರೆ ಎಂದರು.
ಹೆಚ್ಚುವರಿಯಾಗಿ ಡಿಸಿಎಂ ಹ್ದುೆ ಸೃಷ್ಟಿ ಸಂಬಂಧ ಹೈಕಮಾಂಡ್ ಗಮನಕ್ಕೆ ತಂದಿದ್ದು ಅವರ ತೀರ್ಮಾನದಂತೆ ಕ್ರಮ ಆಗಲಿದೆ. ಮಹದೇವಪ್ಪ , ಸತೀಶ್ ಜಾರಕಿಹೊಳಿ, ಮುನಿಯಪ್ಪ ದೆಹಲಿ ಪ್ರವಾಸದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಹೆದ್ದಾರಿ ಯೋಜನೆಗಳ ಸಂಬಂಧ ಕೇಂದ್ರ ಸಚಿವ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಲು ತೆರಳಿದ್ದು ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು ಜಲಾಶಯಗಳಿಗೆ ಜೀವಕಳೆ ಬಂದಿದ್ದು ಕೆರೆಕಟ್ಟೆಗಳು ಭರ್ತಿಯಾಗಿ ರೈತರೆಲ್ಲ ಸಂತಸದಿಂದ ಇದ್ದಾರೆ. ಆದರೆ ಕೆಲವೆಡೆ ವಿಪರೀತ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದ್ದು, ರಸ್ತೆ ಸೇರಿದಂತೆ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಇದುವರೆಗೂ 524 ಮನೆಗಳು ಹಾನಿಯಾಗಿದ್ದು ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ಎ್ ಮಾನದಂಡದಡಿ ಪರಿಹಾರ ವಿತರಣೆ ಕ್ರಮ ಕೈಗೊಳ್ಳಲಾಗುತ್ತಿದೆ.
ಅತಿವೃಷ್ಟಿ ಕಾರಣ ಮೂರು ಮಂದಿ ಸಾವಿಗೀಡಾಗಿದ್ದು ಅವರಿಗೆ ಪರಿಹಾರವನ್ನು ಒದಗಿಸಲಾಗಿದೆ. ಹಸು- ಕರು ಸಾವಿಗೀಡಾದ ಸಂದರ್ಭದಲ್ಲಿ ಮಾಲೀಕರಿಗೆ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಯಾವುದೇ ಅನ್ಯಾಯ ಆಗದಂತೆ ಸರ್ಕಾರ ಎಲ್ಲಾ ರೀತಿಯ ಅನುಕೂಲ ಕಲ್ಪಿಸಲಿದೆ ಎಂದು ಭರವಸೆ ನೀಡಿದರು.
ಹೊಸ ಯೋಜನೆಗಳನ್ನು ತರುವ ಮುನ್ನ ಈಗಾಗಲೇ ಅನುಷ್ಠಾನದಲ್ಲಿ ಇರುವಂತಹ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಮುಂದುವರೆಸಲು ಹಾಗೂ ಕಾರ್ಯಗತ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಹೆಚ್ಚುವರಿ ಭೂಮಿ ಬೇಕಾಗಿದೆ ಏರ್ ಬಸ್ ಲ್ಯಾಂಡ್ ಹಾಗೂ ಟೇಕ್ ಆ್ ಆಗಲು ಹೆಚ್ಚುವರಿ ರನ್ ವೇ ಬೇಕಾಗಿದ್ದು ಅಗತ್ಯ ಭೂಮಿ ಹಾಗೂ ಕಾಮಗಾರಿಕಾರಿಗೆ ಬೇಕಾದ ಅನುದಾನ ಒದಗಿಸಲಾಗುವುದು ಹೆಚ್ಚುವರಿ ಭೂಮಿ ಒದಗಿಸುವ ನಿಟ್ಟಿನಲ್ಲಿ ಅತಿ ಶೀಘ್ರದಲ್ಲಿಯೇ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಾಜರಿದ್ದ ಜಿಲ್ಲಾಧಿಕಾ ರಿಗಳು ಹೇಳಿದರು.
ಹಾಸನ ನಗರದ ರೈಲ್ವೆ ಮೇಲ್ ಸೇತುವೆ ಕಾಮಗಾರಿಗೆ 60 ಕೋಟಿ ಹಣ ಬೇಕಾಗಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರೊಂದಿಗೂ ಮಾತನಾಡಿದ್ದು ಕೇಂದ್ರದ ಹಣದೊಂದಿಗೆ ರೈಲ್ವೆ ರಾಯಾಲ್ಟಿ ಹಣವನ್ನು ಕಾಮಗಾರಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ರಾಜಣ್ಣ ತಿಳಿಸಿದರು.
ಹಾಸನ ನಗರಸಭೆಯನ್ನು ಕಾರ್ಪೊರೇಷನ್ ಆಗಿ ಮೇಲ್ದರ್ಜೆಗೇರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇತ್ತೀಚೆಗೆ 25 ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರ್ಪಡೆಗೊಳಿಸಿದ್ದು ಇಲ್ಲಿ ಇ.ಖಾತೆ ಪಡೆದಿರುವ ದಾಖಲೆಗಳನ್ನೇ ನಗರಸಭೆಯಲ್ಲಿಯೂ ಪರಿಗಣಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೊರೂರಿನ ಹೇಮಾವತಿ ಜಲಾಶಯಕ್ಕೆ ಮುಖ್ಯಮಂತ್ರಿಗಳು ಆಗಮಿಸಿ ಬಾಗಿನ ಅರ್ಪಿಸುವ ಸಂಬಂಧ ಮಾತನಾಡಲಾಗಿದೆ. ಶೀಘ್ರದಲ್ಲಿಯೇ ಸಿಎಂ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ. ಜಲಾಶಯದ ಎದುರು ಕೆ ಆರ್ ಎಸಾದರಿ ಉದ್ಯಾನವನ ನಿರ್ಮಾಣಕ್ಕೆ ಎಚ್ ಕೆ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಡಾ ಹಗರಣ ಸಂಬಂಧ ಸಿ.ಎಂ ವಿರುದ್ಧ ಆರೋಪಗಳನ್ನು ಮಾಡುತ್ತಿರುವವರು ಸಹ ನಿವೇಶನಗಳನ್ನು ಹೊಂದಿದ್ದಾರೆ. 15 ವರ್ಷಗಳ ಹಿಂದೆಯೇ ಬಿಜೆಪಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರಿಗೆ ನಿವೇಶನ ನೀಡಲಾಗಿದ್ದು ಮುಖ್ಯಮಂತ್ರಿಗಳಿಗೆ ಕಪ್ಪು ಚುಕ್ಕೆ ತರಲು ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ, ರಾಜಕೀಯದಲ್ಲಿ ಯಾರು ಸತ್ಯ ಹರಿಶ್ಚಂದ್ರರು ಇಲ್ಲ ಎಂದು ಹೇಳಿದರು.
ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳ ಅನುಕೂಲಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚು ಭಕ್ತರು ದರ್ಶನಕ್ಕೆ ಅವಕಾಶ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಈ ವೇಳೆ ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಡಿಸಿ ಸಿ.ಸತ್ಯಭಾಮಾ, ಸಿಇಒ ಬಿ.ಆರ್.ಪೂರ್ಣಿಮಾ, ಎಸ್ಪಿ ಮೊಹಮದ್ ಸುಜೀತಾ, ಉಪವಿಭಾಗಾಧಿಕಾರಿ ಮಾರುತಿ ಇತರರು ಇದ್ದರು.