ವಡೋದರ, ಸೆ.1– ಗುಜರಾತ್‌ನ ವಡೋದರಾದ ಜನವಸತಿ ಪ್ರದೇಶಗಳಲ್ಲಿ ಹರಿದು ಬಂದ ವಿಶ್ವಮೈತ್ರಿ ನದಿಯ ಪ್ರವಾಹದ ನೀರಿನಿಂದ ಆಗಸ್ಟ್ 27ರಿಂದ 29ರ ನಡುವೆ ಒಟ್ಟು 24 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಈ ನದಿಯಲ್ಲಿ 440 ಮೊಸಳೆಗಳಿದ್ದು ಭಾರಿ ಮಳೆಯ ಕಾರಣ ಅಜ್ವಾ ಅಣೆಕಟ್ಟಿನಿಂದ ಹೊರಗೆ ಹರಿಯಬಿಟ್ಟ ನೀರಿನಲ್ಲಿ ಇವು ಜನವಸತಿ ಪ್ರದೇಶಗಳಿಗೆ ಬಂದಿದ್ದವು ಎಂದು ವಡೋದರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕರಣ್‌ಸಿನ್ಹ ರಜಪೂತ್ ಹೇಳಿದ್ದಾರೆ.
24 ಮೊಸಳೆಗಳ ಜೊತೆಗೆ ನಾವು ಹಾವುಗಳು, ನಾಗರಹಾವುಗಳು, ಸುಮಾರು 40 ಕೆಜಿ ತೂಕವಿದ್ದ ಎರಡು ದೊಡ್ಡ ಆಮೆಗಳು ಮತ್ತು ಮುಳ್ಳುಹಂದಿ ಸೇರಿದಂತೆ ಇತರ 75 ಪ್ರಾಣಿಗಳನ್ನು ಈ ಮೂರು ದಿನಗಳಲ್ಲಿ ರಕ್ಷಿಸಿದ್ದೇವೆ. ವಿಶ್ವಮೈತ್ರಿ ನದಿಗೆ ಸಮೀಪದಲ್ಲಿ ಅನೇಕ ಜನವಸತಿ ಪ್ರದೇಶಗಳಿವೆ ಎಂದು ಅವರು ವಿವರಿಸಿದ್ದಾರೆ.