ಬೆಂಗಳೂರು,ಮಾ.24- ನಗರದ ಆರು ಮಂದಿ ರೌಡಿಗಳಿಗೆ ಶಸ್ತ್ರಾಸ್ತ್ರ ಪರವಾನಗಿ (ಗನ್ ಲೈಸನ್ಸ್) ನೀಡಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈಗ ಆರು ಮಂದಿ ರೌಡಿಗಳ ಬಳಿ ಗನ್ ಲೈಸೆನ್ಸ್ ಇರುವುದು ಗೊತ್ತಾಗಿದೆ. ಈ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ವಿವರಿಸಿದರು.
ಯಾವ ಹಿನ್ನೆಲೆಯಲ್ಲಿ ಮತ್ತು ಯಾವ ಸನ್ನಿವೇಶದಲ್ಲಿ ಅವರುಗಳಿಗೆ ಗನ್ ಲೈಸೆನ್ಸ್ ನೀಡಲಾಗಿದೆ ಎಂಬುದನ್ನು ತನಿಖೆ ನಡೆಸಿ ತಿಳಿದುಕೊಳ್ಳಲಾಗುವುದು ಎಂದು ಹೇಳಿದರು.ಒಂದು ವೇಳೆ ಅವರುಗಳಿಗೆ ಅಕ್ರಮವಾಗಿ ಗನ್ ಲೈಸೆನ್ಸ್ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
ಅವರುಗಳು ಅಕ್ರಮವಾಗಿ ಗನ್ ಲೈಸೆನ್ಸ್ ಪಡೆದಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದರೆ ಪರವಾನಗಿಯನ್ನು ವಾಪಸ್ ಪಡೆಯಲು ಅವಕಾಶವಿದೆ ಎಂದು ಅವರು ಹೇಳಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಪರವಾನಗಿ ಶಸ್ತ್ರಾಸ್ತ್ರಗಳನ್ನು ಸಮೀಪದ ಠಾಣೆಗೆ ಒಪ್ಪಿಸುವಂತೆ ಇತ್ತೀಚೆಗೆ ಆಯುಕ್ತರು ತಿಳಿಸಿದ್ದರು. ಈ ಸಂದರ್ಭದಲ್ಲಿ ಆರು ರೌಡಿಗಳು ಗನ್ ಲೈಸೆನ್ಸ್ ಪಡೆದುಕೊಂಡಿರುವುದು ಗೊತ್ತಾಗಿದೆ.