ಇಂದಿನಿಂದ ಹಾಸನಾಂಬಾ ದರ್ಶನ ಆರಂಭ 12 ದಿನ ಭಕ್ತರಿಗೆ ದರ್ಶನಭಾಗ್ಯ

Social Share

ಹಾಸನ,ಅ.13- ನಗರದ ಅಧಿದೇವತೆ ಹಾಸನಾಂಬ ದೇವಿಯು ಇಂದಿನಿಂದ ಭಕ್ತರಿಗೆ ದರ್ಶನ ನೀಡಲಿದ್ದು, ಇಂದು ವಿದ್ಯುಕ್ತವಾಗಿ ಧಾರ್ಮಿಕ ವಿವಿಧಾನಗಳ ಮೂಲಕ ಸರಿಸುಮಾರು 12.16ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಯಿತು.

ಈ ಬಾರಿ 15 ದಿನ ಬಾಗಿಲು ತೆರೆಯಲಿದ್ದು 12 ದಿನಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ,ಮತ್ತು ಅ.25 ಸೂರ್ಯ ಗ್ರಹಣ ದಂದು ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ.
ಉಳಿದಂತೆ ಎಲ್ಲ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಶ್ವೀಜ ಮಾಸ ಹುಣ್ಣಿಮೆ ನಂತರ ಬರುವ ಮೊದಲ ದಿನವಾದ ಇಂದು ಧಾರ್ಮಿಕ ವಿಧಾನದಂತೆ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಸುಮಾರು 12.16 ಕ್ಕೆ ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ ,ಶಾಸಕ ಪ್ರೀತಂ ಜೇ ಗೌಡ , ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ , ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಬಿ.ಎ.ಜಗದೀಶ್ ,ಎಸ್ಪಿ ಹರಿರಾಂ ಶಂಕರ್ , ಡಿವೈ ಎಸ್ಪಿ ಉದಯಬಾಸ್ಕರ್ , ಎಎಸ್ಪಿ ತಮ್ಮಯ್ಯ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜು,ನಗರಸಭೆ ಅಧ್ಯಕ್ಷ ಮೂಹನ್, ವಾರ್ತಾಧಿಕಾರಿ ವಿನೋದ್ ಚಂದ್ರ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿ ಬಾಗಿಲ ಬೀಗ ಮುದ್ರೆ ತೆರೆಯಲಾಯಿತು.

ಬೆಳಿಗ್ಗೆ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಸಂಪ್ರದಾಯದಂತೆ ತಳವಾರ ವಂಶದ ನರಸಿಂಹರಾಜ್ ಅರಸ್ ಅವರು ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು. ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪ ಗಳಿಂದ ಅಲಂಕರಿಸಲಾಗಿತ್ತು. ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಉಳಿದ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ

ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಹಾಗೂ ಮಧ್ಯಾಹ್ನ 4ರಿಂದ ರಾತ್ರಿ 10 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ ಒಬ್ಬರಿಗೆ 300 ಹಾಗೂ 1000 ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.

ಜಿಲ್ಲಾಡಳಿತ ಭಕ್ತರಿಗೆ ಅಗತ್ಯ ವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯದ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ 756 ಸಿಬ್ಬಂದಿಯೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Articles You Might Like

Share This Article