ನಾಳೆಯಿಂದ ಹಾಸನಾಂಬಾ ದರ್ಶನ

ಹಾಸನ, ನ.4- ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಆನ್‍ಲೈನ್ ಮುಖಾಂತರ ಹಾಸನಾಂಬಾ ದರ್ಶನ ಲಭ್ಯವಿದೆ.  ನಾಳೆಯಿಂದ ದೇವಾಲಯ ತೆರೆಯಲು ತೀರ್ಮಾನಿಸಲಾಗಿದ್ದು, ಈ ಬಾರಿ ವಿವಿಐಪಿಗಳಿಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಸಾರ್ವಜನಿಕರು ದೇವಾಲಯಕ್ಕೆ ಆಗಮಿಸಿ ನಗರದ ವಿವಿಧೆಡೆ ಅಳವಡಿಸಿರುವ ಎಲ್‍ಇಡಿ ಪರದೆ ಮೇಲೆ ದೇವಿಯ ದರ್ಶನ ಪಡೆಯಬಹುದಾಗಿದೆ. ಇದರ ಜತೆಗೆ ಹಾಸನಾಂಬಾ ಲೈವ್ 20-20 ಆನ್‍ಲೈನ್ ಮುಖಾಂತರವೂ ದೇವಿಯ ದರ್ಶನ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ದೇವಾಲಯದ ಸುತ್ತಮುತ್ತ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ. ದೇವಾಲಯಕ್ಕೆ ಬರುವ ಭಕ್ತರು ಎಲ್‍ಇಡಿಗಳಲ್ಲಿ ದೇವಿಯ ದರ್ಶನ ಪಡೆದು ಪುನೀತರಾಗಬೇಕು. ಅದೇ ರೀತಿ ದೇವಾಲಯಕ್ಕೆ ಆಗಮಿಸಲು ಸಾಧ್ಯವಿಲ್ಲದವರು ನಗರದ ವಿವಿಧೆಡೆ ಅಳವಡಿಸಿರುವ ಎಲ್‍ಇಡಿ ಪರದೆಗಳ ಮೇಲೆ ದೇವಿ ದರ್ಶನ ಪಡೆಯಬಹುದು.

ನಾಳೆ ಬೆಳಗ್ಗೆ 11 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುವುದು. ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಪ್ರಸಾದ ಲಭ್ಯವಿರುವುದಿಲ್ಲ. 12 ದಿನಗಳ ಕಾಲ ದೇವರ ದರ್ಶನವನ್ನು ಸ್ಕ್ರೀನಿಂಗ್ ಹಾಗೂ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ನಾಳೆ ದೇವಾಲಯಕ್ಕೆ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿರಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದರು.