Friday, November 22, 2024
Homeಜಿಲ್ಲಾ ಸುದ್ದಿಗಳು | District Newsಸಕಲೇಶಪುರದಲ್ಲಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಸಿದ್ಧತೆ ಪೂರ್ಣ

ಸಕಲೇಶಪುರದಲ್ಲಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಸಿದ್ಧತೆ ಪೂರ್ಣ

ಹಾಸನ,ಮಾ.22- ಸಕಲೇಶಪುರ ತಾಲೂಕು ಹೆತ್ತೂರಿನಲ್ಲಿ ನಡೆಯುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವ ಸಿದ್ಧತಾ ಕಾರ್ಯ ಪೂರ್ಣಗೊಂಡಿವೆ ಎಂದು ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್. ಮಲ್ಲೇಶಗೌಡ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಹೆತ್ತೂರಿನ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದ ಡಾ.ಸಿದ್ದಲಿಂಗಯ್ಯ ಮಹಾವೇದಿಕೆಯಲ್ಲಿ ಮಾ.23 ಮತ್ತು 24ರಂದು ಎರಡು ದಿನಗಳ ಕನ್ನಡ ಉತ್ಸವ ನಡೆಯಲಿದೆ. ಮೊದಲ ದಿನ ಬೆಳಗ್ಗೆ 8 ಗಂಟೆಗೆ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಶ್ರುತಿ ಎಂ.ಕೆ. ಅವರು ರಾಷ್ಟ್ರಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ ಪರಿಷತ್ತಿನ ಧ್ವಜ ಮತ್ತು ತಹಸೀಲ್ದಾರ್ ಮೇಘನಾ.ಜಿ ಅವರು ನಾಡಧ್ವಜ ನೆರವೇರಿಸಲಿದ್ದಾರೆ .

ಬೆಳಗ್ಗೆ 8.30 ಕ್ಕೆ ಸಮ್ಮೇಳನ ಆವರಣದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಕನ್ನಡ ಜಾಗೃತಿ ಜಾಥಾ ನಡೆಯಲಿದ್ದು, ಸಕಲೇಶಪುರ ಸಿಪಿಐ ನಿರಂಜನಕುಮಾರ್ ಚಾಲನೆ ನೀಡುವರು ಎಂದು ತಿಳಿಸಿದರು. ಬೆಳಗ್ಗೆ 9 ಗಂಟೆಗೆ ವೈವಿಧ್ಯಮಯ ಕಲಾತಂಡ ಮತ್ತು ಪೂರ್ಣಕುಂಭಗಳೊಂದಿಗೆ ಸಮ್ಮೇಳನ ಆರಂಭವಾಗಲಿದ್ದು, ಸತ್ಯ ಮಲ್ಲೇಶ್ವರ ದೇವಾಲಯದಿಂದ ಊರಿನ ಮುಖ್ಯ ರಸ್ತೆ ಮೂಲಕ ಸಮ್ಮೇಳನ ಆವರಣಕ್ಕೆ ಬರಲಿದೆ ಎಂದು ಹೇಳಿದರು.

ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಚಾಲನೆ ನೀಡಲಿದ್ದು, ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಒಒ ಡಾ.ಬಿ.ಆರ್.ಪೂರ್ಣಿಮಾ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಕಲೇಶಪುರ ತಾಲೂಕು ಕಸಾಪ ಅಧ್ಯಕ್ಷರಾದ ಶಾರದಾ ಗುರುಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿರುವರು.

ನಾಗವಾರರಿಂದ ಉದ್ಘಾಟನೆ:
ಸಮ್ಮೇಳನದ ಪಾವನ ಸಾನಿಧ್ಯವನ್ನು ಹಾಸನ, ಕೊಡಗು ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ವಹಿಸುವರು. ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಗೌರವ ಉಪಸ್ಥಿತಿ ಇರಲಿದ್ದು, ಹಾಸನ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ ಆಶಯನುಡಿಗಳನ್ನು ಆಡಲಿದ್ದು, ರಮಾ ಸಿದ್ದಲಿಂಗಯ್ಯ ಅವರು ಮಹಾ ವೇದಿಕೆ ಉದ್ಘಾಟನೆ ಮಾಡಿದರೆ, ಖ್ಯಾತ ಸಾಹಿತಿ, ಜಾನಪದ-ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ.ಕಾಳೇಗೌಡ ನಾಗವಾರ ಅವರು ಬೆಳಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟನೆ ನೆರವೇರಿಸುವರು ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ನುಡಿ ಸಂದೇಶ ನೀಡುವರು,ನಿವೃತ್ತ ಐಎಎಸ್ ಅಧಿಕಾರಿ ವೈ.ಕೆ.ಮುದ್ದುಕೃಷ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.ವ್ಯಂಗ್ಯಚಿತ್ರ ಪ್ರದರ್ಶನವನ್ನು ಎಸ್ಪಿ ಮೊಹಮ್ಮದ್ ಸುಜೀತಾ, ಪುಸ್ತಕ ಮಳಿಗೆಯನ್ನು ಡಾ.ಬಿ.ಆರ್.ಪೂರ್ಣಿಮಾ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಗಾನ ಕಲಾಭೂಷಣ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಅವರ ನುಡಿ ನಂತರ ಸಮ್ಮೇಳನಾಧ್ಯಕ್ಷರಾದ ಶೈಲಜಾ ಹಾಸನ್ ಮಾತನಾಡುವರು ಎಂದು ವಿವವರಿಸಿದರು.

ಸಾಧಕರಿಗೆ ಸನ್ಮಾನ:
ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಹೆತ್ತೂರಿನ ವೈದ್ಯರು ಹಾಗೂ ಸಮಾಜ ಸೇವಕರಾದ ಡಾ. ಅಪ್ಪಸ್ವಾಮಿಗೌಡ, ಅರಕಲಗೂಡು ತಾಲೂಕು ದೊಡ್ಡಮಗ್ಗೆಯ ಡಾ.ಎಂ.ಸಿ.ರಂಗಸ್ವಾಮಿ, ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಹೆಚ್.ಪಿ.ಮೋಹನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಸುಬ್ಬು ಹೊಲೆಯಾರ್ ಹಾಗೂ ಮೈಸೂರಿನ ಜಯದೇವ ಹೃದ್ರೋಗ ತಜ್ಞರಾದ ಡಾ.ಶ್ರೀನಿ ಹೆಗಡೆ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು ಎಂದರು.

ಗೋಷ್ಠಿ-1:
ಮಧ್ಯಾಹ್ನ 2.30ರಿಂದ ಜಾನಪದ ಗಾಯನ ಮತ್ತು ವಿಶ್ಲೇಷಣೆ ಗೋಷ್ಠಿ ನಡೆಯಲಿದ್ದು, ಖ್ಯಾತ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಆಶಯ ನುಡಿ ಆಡುವರು. ಗಾಯಕರಾದ ಸ.ವೆಂ.ಪೂರ್ಣಿಮಾ, ಲಕ್ಷ್ಮಣ್ ತಟ್ಟೆಕೆರೆ, ಎಲ್.ದೇವರಾಜ್, ಬನುಮ ಗುರುದತ್ ಜಾನಪದ ಹಾಡು ಹಾಡಿದರೆ, ಸಾಹಿತಿಗಳಾದ ಹುಲ್ಲಹಳ್ಳಿ ರಾಜೇಶ್ವರಿ, ದೊಡ್ಡಮನೆ ಆನಂದ್, ಅವರೇಕಾಡು ವಿಜಯಕುಮಾರ್ ಮತ್ತು ಬಿ.ಡಿ.ಶಂಕರೇಗೌಡ ವಿಶ್ಲೇಷಣೆ ಮಾಡುವರು ಎಂದರು.

ಗೋಷ್ಠಿ-2:
ಸಂಜೆ 4.30ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾದ ಶೈಲಜಾ ಹಾಸನ್ ಅವರು ಅಧ್ಯಕ್ಷತೆ ವಹಿಸಲಿದ್ದು, ಕವಯತ್ರಿ ಸುಜಲಾದೇವಿ ಪ್ರಧಾನ ಸಂವಾದಕರಾಗಿ ಭಾಗಿಯಾಗುವರು. ಕಸಾಪ ಪದಾಧಿಕಾರಿಗಳು ಸಾಹಿತಿಗಳು ಸಂವಾದಕರಾಗಿ ಹಾಜರಿರುವರು, 8 ಮಂದಿ ಕಸಾಪ ಮಾಜಿ ಅಧ್ಯಕ್ಷರು ಗೌರವ ಉಪಸ್ಥಿತಿ ಇರುವರು ಎಂದರು.

ನಂತರ ಭರತನಾಟ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ ಉದ್ಘಾಟನೆ ನೆರವೇರಿಸುವರು ಎಂದರು.ಗೋಷ್ಠಿ-3: ಮಾ.24 ರ ಭಾನುವಾರ ಬೆಳಗ್ಗೆ 9 ಗಂಟೆಗೆ ಕನ್ನಡ ಗೀತ ಗಾಯನ ನಂತರ ಸಂಸ್ಕಾರ-ಸಂಸ್ಕಾರ-ಸಲ್ಲಾಪ ವಿಷಯ ಕುರಿತು ಕನ್ನಡ ಸಾಹಿತ್ಯ ಮತ್ತು ಮಲ್ಯಗಳ ಸಂಘರ್ಷ ಗೋಷ್ಠಿ ನಡೆಯಲಿದೆ. ಅಧ್ಯಕ್ಷತೆಯನ್ನು ನಾಡಿನ ಖ್ಯಾತ ವಾಗ್ಮಿ ಹಿರೆಮಗಳೂರು ಕಣ್ಣನ್ ವಹಿಸಲಿದ್ದು, ಇಂದಿರಮ್ಮ ನಾಗೇಶ್ ಆಶಯ ನುಡಿ ಆಡುವರು, ಸಂಸ್ಕøತಿ ಚಿಂತಕರಾದ ಚಟ್ನಳ್ಳಿ ಮಹೇಶ್, ವಾಗ್ಮಿ ನಾಗಶ್ರೀ ತ್ಯಾಗರಾಜ್ ಸಂವಾದಿಸುವರು. ಸಾಹಿತಿಗಳು, ಹಿರಿಯ ಪತ್ರಕರ್ತರು ಗೌರವ ಉಪಸ್ಥಿತಿ ಇರುವರು.

ಗೋಷ್ಠಿ-4:
11.45 ಕ್ಕೆ ಶುರುವಾಗುವ ಕನ್ನಡ ಸಾಹಿತ್ಯ ಮತ್ತು ರೈತಪರ ಚಿಂತನೆಗಳು ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಮ.ರಾಮಕೃಷ್ಣ ವಹಿಸಲಿದ್ದು, ಶಿಷ್ಟ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಕುರಿತು ಡಾ.ಬೆಟ್ಟೇಗೌಡ, ಜನಪದ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ವಿಷಯದ ಬಗ್ಗೆ ಪ್ರೊ.ಮೈಸೂರು ಕೃಷ್ಣಮೂರ್ತಿ, ಕನ್ನಡ ಭಾಷಾ ಸಂಪತ್ತಿಗೆ ಕೃಷಿಕರ ಕೊಡುಗೆ ಬಗ್ಗೆ ಡಾ.ಅ.ಪ.ರಕ್ಷಿತ್ ವಿಷಯ ಮಂಡಿಸುವರು ಎಂದು ವಿವರಿಸಿದರು.

ಗೋಷ್ಠಿ-5:
ಮಧ್ಯಾಹ್ನ 2ರಿಂದ ಕವಿಗೋಷ್ಠಿ ಆರಂಭವಾಗಲಿದ್ದು, ಪ್ರಭಾಮಣಿ ನಾಗರಾಜು ಅಧ್ಯಕ್ಷತೆ ವಹಿಸಲಿದ್ದು, ಮಂಜುಳಾ ಕುಮಾರಸ್ವಾಮಿ ಆಶಯನುಡಿ ಆಡುವರು. 25 ಮಂದಿ ಕವಿಗಳು ಕವನವಾಚನ ಮಾಡುವರು ಎಂದರು.

ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, ಡಾ.ಹೆಚ್.ಎಲ್.ಮಲ್ಲೇಶಗೌಡ ಅಧ್ಯಕ್ಷತೆ ವಹಿಸುವರು. ಗೌರವ ಕಾರ್ಯದರ್ಶಿಗಳಾದ ಜಾವಗಲ್ ಪ್ರಸನ್ನ ಕುಮಾರ್, ಬಿ.ಆರ್.ಬೊಮ್ಮೇಗೌಡ ನಿರ್ಣಯ ಮಂಡಿಸುವರು. ಜಿಲ್ಲಾ ಕಸಾಪ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಹೇಳಿದರು. ಸಂಜೆ 5 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ನಾಡಿನ ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಸಮಾರೋಪ ನುಡಿಗಳನ್ನಾಡುವರು.

ಯಸಳೂರು ತೆಂಕಲಗೂಡು ಬೃಹನ್ಮಠದ ಪೂಜ್ಯಶ್ರೀ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾವನ ಸಾನಿಧ್ಯವಹಿಸುವರು. ಡಾ.ಸುದರ್ಶನ್, ಹಾಡ್ಲಹಳ್ಳಿ ನಾಗರಾಜ್ ಮತ್ತು ಎಚ್.ಕೆ.ಚಂದ್ರಶೇಖರ್ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ಅವರು ವಿಶೇಷ ಪ್ರಶಸ್ತಿ ಪ್ರದಾನ ಮಾಡುವರು ಎಂದು ವಿವರಿಸಿದರು.

ಕಡೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮಲೆನಾಡ ವೈಭವ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ ಎಂದರು. ಜಿಲ್ಲೆಯ ವಿವಿಧೆಡೆಗಳಿಂದ ಸರ್ವರೂ ಆಗಮಿಸಿ ಸಮ್ಮೇಳನ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು. ವಿಶೇಷವಾಗಿ ಇತ್ತೀಚಿಗೆ ದುರಂತ ಸಾವಿಗೀಡಾದ ಅಂಬಾರಿ ವೀರ ಅರ್ಜುನ ಆನೆ ಹೆಸರನ್ನು ಮಹಾದ್ವಾರಕ್ಕೆ ಇಡಲಾಗಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಸಾಹಿತಿ ಹುಲ್ಲೇನಹಳ್ಳಿ ರಾಜೇಶ್ವರಿ, ಕಸಾಪ ಪದಾಧಿಕಾರಿಗಳಾದ ಜಯರಾಂ, ಬಿ.ಆರ್.ಬೊಮ್ಮೇಗೌಡ, ಶಂಕರ್, ಹೆತ್ತೂರು ನಾಗರಾಜ್, ವನಜಾ ಸುರೇಶ್ ಇದ್ದರು.

RELATED ARTICLES

Latest News