ಕಠಂಡು,ಸೆ.11- ಸಾಮೂಹಿಕ ಪ್ರತಿಭಟನೆಗಳು ಸರ್ಕಾರವನ್ನು ಉರುಳಿಸಿದ ನಂತರ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿಯಾಗಲು ಒಪ್ಪಿಕೊಂಡಿರುವ ಬೆನ್ನಲ್ಲೇ, ಭಾರತದ ಬೆಂಬಲವನ್ನು ಶ್ಲಾಘಿಸಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮೇ ಮೋದಿ ಜಿ ಕೋ ನಮಸ್ಕರ್ ಕಾರ್ತಿ ಹೂಂ (ನಾನು ಪ್ರಧಾನಿ ಮೋದಿಗೆ ನಮಸ್ಕಾರ ಮಾಡುತ್ತೇನೆ). ಮೋದಿ ಜಿ ಬಗ್ಗೆ ನನಗೆ ತುಂಬಾ ಒಳ್ಳೆಯ ಅನಿಸಿಕೆ ಇದೆ ಎಂದು ಕರ್ಕಿ ಹೇಳಿದ್ದಾರೆ.
ಜನರಲ್-ಝಡ್ ಗುಂಪು ನೇಪಾಳದಲ್ಲಿ ಇತ್ತೀಚಿನ ಚಳವಳಿಯನ್ನು ಮುನ್ನಡೆಸಿತು. ಅಲ್ಪಾವಧಿಗೆ ಸರ್ಕಾರವನ್ನು ಮುನ್ನಡೆಸುವುದಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಪ್ರತಿಭಟನೆಗಳಲ್ಲಿ ಪ್ರಾಣ ಕಳೆದುಕೊಂಡವರನ್ನು ಗೌರವಿಸುವುದು ತನ್ನ ಮೊದಲ ಆದ್ಯತೆ. ಈ ವೇಳೆ ಸಾವನ್ನಪ್ಪಿದ ಯುವಕರಿಗೆ ಏನಾದರೂ ಮಾಡುವುದು ನಮ ತಕ್ಷಣದ ಗಮನವಾಗಿರುತ್ತದೆ ಎಂದು ಹೇಳಿದ್ದಾರೆ.
ಚಳವಳಿಯ ಯುವ ಸದಸ್ಯರು, ಹುಡುಗಿಯರು ಮತ್ತು ಹುಡುಗರು ತಮ ನಾಯಕತ್ವದ ಪರವಾಗಿ ಮತ ಚಲಾಯಿಸಿದ್ದಾರೆ. ಮಧ್ಯಂತರ ಸರ್ಕಾರ ಮುನ್ನಡೆಸುವ ಅವರ ವಿನಂತಿಯನ್ನು ನಾನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.
ನೇಪಾಳದ ಪ್ರಕ್ಷುಬ್ಧ ರಾಜಕೀಯ ಇತಿಹಾಸದ ಕುರಿತು ಕರ್ಕಿ ಮುಂದಿನ ಸವಾಲುಗಳನ್ನು ಒಪ್ಪಿಕೊಂಡರು. ನೇಪಾಳದಲ್ಲಿ ಹಿಂದಿನಿಂದಲೂ ಸಮಸ್ಯೆಗಳಿವೆ. ಈಗ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನೇಪಾಳದ ಅಭಿವೃದ್ಧಿಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ದೇಶಕ್ಕೆ ಹೊಸ ಆರಂಭವನ್ನು ಸ್ಥಾಪಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಜನತೆಗೆ ಅಭಯ ನೀಡಿದ್ದಾರೆ.
2016ರಲ್ಲಿ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕರ್ಕಿ ಅವರು ತಮ ದೇಶವನ್ನು ಬೆಂಬಲಿಸುವಲ್ಲಿ ಭಾರತದ ಪಾತ್ರವನ್ನು ಶ್ಲಾಘಿಸಿದ್ದಾರೆ. ಭಾರತದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ಭಾರತ ನೇಪಾಳಕ್ಕೆ ಸಾಕಷ್ಟು ಸಹಾಯ ಮಾಡಿದೆ ಎಂದು ನೆನೆಪಿಸಿಕೊಂಡಿದ್ದಾರೆ.