Friday, October 18, 2024
Homeಬೆಂಗಳೂರುಮಳೆಯಿಂದ ಹಾವೇರಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ, ಪರಿಹಾರ ನೀಡುವಂತೆ ಬೊಮ್ಮಾಯಿ ಒತ್ತಾಯ

ಮಳೆಯಿಂದ ಹಾವೇರಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ, ಪರಿಹಾರ ನೀಡುವಂತೆ ಬೊಮ್ಮಾಯಿ ಒತ್ತಾಯ

Haveri rain damage: call for compensation

ಬೆಂಗಳೂರು,ಅ.17- ಹಾವೇರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ, ಒಂದು ಮಗು ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದ್ದರ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, ಮಳೆಯಿಂದಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೆಳೆ ನಾಶವಾಗಿದೆ. ಮುಂಗಾರು ಹಂಗಾಮಿನಲ್ಲಿಯೂ ಬೆಳೆ ನಾಶವಾಗಿತ್ತು. ಅದರಂತೆ ಈಗಲೂ ಬೆಳೆ ಹಾನಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮಳೆಯಿಂದಾಗಿ ಮನೆಗಳು ಬಿದ್ದಿದ್ದು, ಮನೆ ಕಳೆದುಕೊಂಡವರಿಗೆ ಪರಿಹಾರದ ಹಣ ಬಿಡುಗಡೆ ಮಾಡಬೇಕು ಹಾಗೂ ಮನೆ ಕಳೆದುಕೊಂಡವರಿಗೆ ಸಾಂತ್ವನ ಕೇಂದ್ರ ತೆರೆದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಹಲವು ಗ್ರಾಮಗಳ ಸಂಪರ್ಕ ರಸ್ತೆ ಕಳೆದು ಹೋಗಿದೆ ಕೂಡಲೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಆರ್‌ಡಿಪಿಆರ್ ಮತ್ತು ಪಿಡಬ್ಲ್ಯೂಡಿ ಇಲಾಖೆಗೆ ಸೂಚನೆ ನೀಡಬೆಕು. ನಾನು ಈಗಾಗಲೇ ಹಾವೇರಿ ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅವರು ಕೂಡಲೇ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದರು.

ಬರಗಾಲ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ. ಈಗಲೂ ಅದೇ ರೀತಿ ಮಾಡದೇ ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಬೇಕು. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಕೇಂದ್ರದತ್ತ ನೋಡದೇ ಮೊದಲು ಪರಿಹಾರ ನೀಡಬೇಕು. ನಂತರ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಅವಕಾಶವಿದೆ.

ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಹಾವೇರಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಬಗ್ಗೆ ಗಮನ ಹರಿಸಿ ಜಿಲ್ಲಾಧಿಕಾರಿ ಬಳಿ ಇರುವ ರಾಷ್ಟ್ರೀಯ ವಿಪತ್ತು ನಿರ್ವಹಣ ನಿಧಿಯಿಂದ ಕೂಡಲೇ ಹಣ ಬಿಡುಗಡೆಗೆ ಆದೇಶ ಮಾಡಬೇಕು ಮತ್ತು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಬಾಲಕ ನಿವೇದನ್ ಸಾವಿಗೆ ಕೂಡಲೆ ಅವರ ಕುಟುಂಬ ವರ್ಗಕ್ಕೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕು ಎಂದು ಒತ್ತಡ ಹಾಕಿದರು.

ಈಗಾಲೇ ಮುಂಗಾರು ಕಳೆದುಕೊಂಡ ರೈತರಿಗೆ ಸಮಯ ವ್ಯರ್ಥ ಮಾಡದೇ ಸರ್ಕಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ಅವರು ತಿಳಿಸಿದರು.

RELATED ARTICLES

Latest News