ಬೆಂಗಳೂರು, ಜೂ.9-ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾಗಿಯಾಗುತ್ತಿಲ್ಲ. ಪ್ರಸಕ್ತ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಜೂನ್ 7ರಂದು ಬೆಳಿಗ್ಗೆ ದೆಹಲಿ ಪ್ರವಾಸ ನಿಗದಿ ಮಾಡಿದ್ದ ಗೌಡರು, ಕಾರಣಾಂತರಗಳಿಂದ ಮುಂದೂಡಿದ್ದರು.
ಎನ್‍ಡಿಎ ಒಕ್ಕೂಟದ ಸಭೆಯಲ್ಲಿ ಜೆಡಿಎಸ್‍ಅನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್‍ಡಿಎ ಸರ್ಕಾರ ರಚನೆಗೆ ಬೆಂಬಲ ಸೂಚಿಸಿದ್ದರು.
ಇಂದು ರಾತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಹಾಗೂ ಅವರ ಸಂಪುಟದ ಸಚಿವರ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರ ಮಾಡಲಿದ್ದಾರೆ.
ಮೋದಿ ಅವರ ಸಂಪುಟದಲ್ಲಿ ಕುಮಾರಸ್ವಾಮಿ ಅವರು ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಆದರೂ ಗೌಡರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರಧಾನಿ ಹಾಗೂ ಅವರ ಸಂಪುಟದ ಸಚಿವರಿಗೆ ಶುಭ ಕೋರಿದ್ದಾರೆ.