ಬೆಂಗಳೂರು, ಆ.4-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಹಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಮೊದಲ ದಿನ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಮೈಸೂರು ಚಲೋ ಎರಡನೇ ದಿನದ ಪಾದಯಾತ್ರೆಯಲ್ಲಿ ಜೆಡಿಎಸ್, ಬಿಜೆಪಿಯ ಎಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಶುಭ ಕೋರಿದ್ದಾರೆ.
ಮೊದಲ ದಿನದ ಪಾದಯಾತ್ರೆ ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿರುವ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ಸರಣಿ ಭ್ರಷ್ಟಾಚಾರದ ಹಗರಣಗಳ ವಿರುದ್ಧ ಎರಡೂ ಪಕ್ಷಗಳು ನಡೆಸುತ್ತಿರುವ ಹೋರಾಟಕ್ಕೆ ಯಶಸ್ಸು ಸಿಗಲಿ ಎಂದು ಆಶಿಸಿದ್ದಾರೆ.
ನಿನ್ನೆ ಕೆಂಗೇರಿ ಬಳಿಯಿಂದ ಉಭಯ ಪಕ್ಷಗಳ ಜಂಟಿ ಪಾದಯಾತ್ರೆ ಆರಂಭಗೊಂಡಿದ್ದು, ಸಂಜೆ ಬಿಡದಿ ತಲುಪಿತ್ತು. ಇಂದು ಬಿಡದಿಯಿಂದ ಆರಂಭಗೊಂಡಿರುವ ಪಾದಯಾತ್ರೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ವರೆಗೆ ಸಾಗಲಿದ್ದು, ಅಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.