Wednesday, December 4, 2024
Homeರಾಜಕೀಯ | Politicsಬಹಿರಂಗ ಚರ್ಚೆಗೆ ಸಿದ್ದ, ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

ಬಹಿರಂಗ ಚರ್ಚೆಗೆ ಸಿದ್ದ, ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು,ಅ.26- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಕಿರುವ ಸವಾಲನ್ನು ಸ್ವೀಕರಿಸಿ ದಾಖಲೆ ಸಹಿತ ಬಹಿರಂಗ ಚರ್ಚೆ ನಡೆಸಲು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಆರೋಪಗಳ ಸುರಿಮಳೆಗೈದರು. ವಿಧಾನಸಭೆ ಅಧಿವೇಶನ ಕರೆದರೆ ಅಲ್ಲಿ ದಾಖಲೆಗಳ ಸಹಿತ ನನ್ನ ಆಡಳಿತಾವಧಿ, ಅವರ ಆಡಳಿತಾವಧಿಯ ವಿಚಾರಗಳ ಚರ್ಚೆ ನಡೆಸಲು ಸಿದ್ದ. ಅವರು ಎಲ್ಲಿಗೆ ಕರೆದರೂ ಅಲ್ಲಿಗೆ ಹೋಗಿ ಚರ್ಚೆ ನಡೆಸಲು ಸಿದ್ದವಿರುವುದಾಗಿ ಹೇಳಿದರು.

ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ. ದಾಖಲೆಗಳ ಸಹಿತ ವಿಧಾನಸಭೆಯಲ್ಲಿ ಮುಕ್ತವಾಗಿ ಚರ್ಚೆ ಮಾಡೋಣ. ಮಾಡುವ ಎಲ್ಲ ಆರೋಪಗಳಿಗೂ ದಾಖಲೆಗಳಿವೆ ಎಂದರು. ನಿಮ್ಮಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ನಮ್ಮ ಮೈತ್ರಿಯ ಬಗ್ಗೆ ಪಾಠ ಹೇಳುತ್ತೀರಿ ಎಂದು ಟೀಕಿಸಿದ ಅವರು, ಕೇರಳದಲ್ಲಿ ಕಮ್ಯುನಿಸ್ಟರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜೊತೆ ಸೇರುತ್ತೀರಿ, ಈಗ ನಮಗೆ ನೀತಿ ಪಾಠ ಹೇಳಲು ಬಂದಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಸ್ವಾಗತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ ಎಂದರು. 2013ರಿಂದ 2018ರವಗಿನ ಅವರ ಆಡಳಿತ ಸೇರಿದಂತೆ ಮೈತ್ರಿ ಸರ್ಕಾರ ಮತ್ತು ಬಿಜೆಪಿ ಆಡಳಿತದಲ್ಲಿ ಆರ್ಥಿಕ ಶಿಸ್ತಿನ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

2018ರಲ್ಲಿ ಬಜೆಟ್‍ನಲ್ಲಿ 2700 ಕೋಟಿ ರೂ. ವಸತಿ ಯೋಜನೆಗೆ ಇಟ್ಟಿದ್ದರು. ಆದರೆ 29000 ಕೋಟಿ ಕಮಿಟ್ಮೆಂಟ್ ಇತ್ತು. ಈ ಸರ್ಕಾರಕ್ಕೆ ನೀರಾವರಿಗೆ ಒಂದು ಲಕ್ಷದ ಮೂರು ಕೋಟಿ ಎಂದು ಘೋಷಿಸಿ ಎಷ್ಟು ಇಟ್ಟಿದ್ದರು? ಹಣಕಾಸಿನ ಮಂಜೂರಾತಿಯೇ ದೊರೆತಿರಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ದೇವಾಲಯಗಳ ಆವರಣದಲ್ಲಿ RSS ಚಟುವಟಿಕೆ ನಿಷೇಧ ಸಮರ್ಥಿಸಿಕೊಂಡ ಕೇರಳ

ಯಾವ್ಯಾವ ಗುತ್ತಿಗೆದಾರರ ಬಳಿ ಎಷ್ಟು ವಸೂಲಿ ಮಾಡಿದ್ದೀರಿ? ಎಂಬುದನ್ನು ಸದನದಲ್ಲೇ ಪ್ರಸ್ತಾಪ ಮಾಡುತ್ತೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ಹೋಟೆಲ್‍ನಲ್ಲಿದ್ದು ಅಧಿಕಾರ ಮಾಡಿದರು ಎಂದು ಸಿದ್ದರಾಮಯ್ಯ ಹೇಳುತ್ತಾ ಇದ್ದಾರೆ. ಹೋಟೆಲ್‍ನಲ್ಲಿದ್ದರೂ ಏನು ಕಾರ್ಯಕ್ರಮ ಮಾಡಿದ್ದೀನಿ ಎಂಬುದಕ್ಕೆ ದಾಖಲೆ ನೀಡುತ್ತೇನೆ ಎಂದರು.

ರಾಜಕೀಯವಾಗಿ ವಿಲನ್: ರಾಜಕೀಯವಾಗಿ ಮುಖ್ಯಮಂತ್ರಿಯವರಿಗೆ ನಾನು ವಿಲನ್. ನಾನ್ಯಾಕೆ ಅವರಿಗೆ ಸ್ನೇಹಿತನಾಗಲಿ? ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿ ಶಾಸಕರೊಬ್ಬರು ನನ್ನ ಮುಂದೆ ಯಾವ ರೀತಿ ದಾಖಲೆ ಎಸೆದು ಯಾವ ರೀತಿ ಮಾಡಿದರು ಎಂಬುದು ಗೊತ್ತಿದೆ. ಎಲ್ಲವನ್ನೂ ನಾನು ತಡೆದುಕೊಂಡಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿವೇಶನದಲ್ಲಿ ಬಿಜೆಪಿ ಮೇಲೆ ನಾನು ಆಕ್ರೋಶ ವ್ಯಕ್ತಪಡಿಸಿದ್ದೆ. ಆ ಸರ್ಕಾರ ಬರುವುದಕ್ಕೆ ಯಾರು ಕಾರಣ? ಬೆಳಗಾವಿ ರಾಜಕಾರಣದ ಬದಲಾವಣೆಯಿಂದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಶಾಸಕರನ್ನು ಕರೆದುಕೊಂಡು ಹೋದರಲ್ಲಾ ಅವರೆಲ್ಲಾ ಅಂದು ಬಿಜೆಪಿ ಜೊತೆ ಕೈ ಜೋಡಿಸಿದ್ದು, ಸಿದ್ದರಾಮಯ್ಯನವರೇ, ಬಿಜೆಪಿ ಜೊತೆ ನೀವು ಕೈ ಜೋಡಿಸದೇ ಇದ್ದರೆ ಅವರ್ಯಾಕೆ ಸರ್ಕಾರ ತೆಗೆಯುತ್ತಿದ್ದರು ಎಂದು ಆರೋಪಿಸಿದರು.

ಐಎಮ್‍ಎ ಪ್ರಕರಣ ತನಿಖೆ ನಡೆಸುತ್ತಿದ್ದರಲ್ಲಾ ಆಗ ಯಾವ ಅಧಿಕಾರಿಯನ್ನು ಅಂದು ಮನೆಗೆ ಕರೆಸಿದ್ದೀರೀ? ನಿಮ್ಮ ಆತ್ಮೀಯರು ಇದ್ದರೆಂದು ಏನು ಮಾಡಿದ್ದೀರಿ? ಹೇಳುತ್ತಾ ಹೋದರೆ ಎರಡು ದಿನ ಬೇಕಾಗುತ್ತದೆ ಎಂದರು.
ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ವಿದ್ಯುತ್ ಬಗ್ಗೆ ಮಾತನಾಡಿದ್ದು ಅಸೂಯೆಯಿಂದಲ್ಲ. ಲೋಪವನ್ನು ಸರಿಪಡಿಸಿಕೊಳ್ಳಲಿ ಎಂದು ಅವರು ತಿಳಿಸಿದರು.

RELATED ARTICLES

Latest News