Saturday, April 13, 2024
Homeರಾಜ್ಯಸುಮಲತಾ ನಿವಾಸಕ್ಕೆ ಭೇಟಿ ನೀಡಿದ ಹೆಚ್‌ಡಿ ಕುಮಾರಸ್ವಾಮಿ

ಸುಮಲತಾ ನಿವಾಸಕ್ಕೆ ಭೇಟಿ ನೀಡಿದ ಹೆಚ್‌ಡಿ ಕುಮಾರಸ್ವಾಮಿ

ಬೆಂಗಳೂರು,ಮಾ.31-  ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಭಾನುವಾರ ಜೆಪಿ ನಗರದ ನಿವಾಸದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ, ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಇದ್ದರು. ಅಭಿಷೇಕ್ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಅವರು ಮನೆಯ ದ್ವಾರದಲ್ಲೇ ನಿಂತು ಎಚ್ಡಿಕೆ ಅವರನ್ನು ಬರಮಾಡಿಕೊಂಡು ಮನೆಯೊಳಗೆ ಕರೆದೊಯ್ದರು. ಈ ವೇಳೆ ಎಚ್ಡಿಕೆ ಅವರು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಹೂಗುಚ್ಛ ನೀಡಿ, ಲೋಕಸಭೆ ಚುನಾವಣೆ ವಿಚಾರವಾಗಿ ಆರೋಗ್ಯಕರ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಂಬರೀಶ್ ಅಣ್ಣನ ಮನೆ ನನಗೆ ಹೊಸದೇನೂ ಅಲ್ಲ. ನಾನು ಅಂಬರೀಶ್ ಒಟ್ಟಿಗೆ ಉಂಡು, ಬೆಳೆದವರು. ಸುಮಲತಾ ಅವರೊಂದಿಗೆ ಭೇಟಿ ಅತ್ಯಂತ ಸೌಹಾರ್ದಯುತವಾಗಿತ್ತು. ಅವರೊಂದಿಗೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸಲಿದ್ದು, ಬೆಂಬಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಕುಮಾರಸ್ವಾಮಿ ಅವರೊಂದಿಗೆ ಆರೋಗ್ಯಕರ ಚರ್ಚೆಯಾಗಿದೆ. ಹಳೆಯದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮಂಡ್ಯ ಕ್ಷೇತ್ರದಲ್ಲಿ ಸಹಕಾರ ನೀಡುವಂತೆ ಕೋರಿದ್ದಾರೆ. ಏಪ್ರಿಲ್ 3 ರಂದು ಮಂಡ್ಯದಲ್ಲಿ ಸಭೆ ಕರೆದಿರುವ ಬಗ್ಗೆ ಅವರಿಗೆ ಹೇಳಿದ್ದೇನೆ. ಅಂದಿನ ಸಭೆಯಲ್ಲಿ ದರ್ಶನ್, ಅಭಿಷೇಕ್ ಇರಲಿದ್ದು, ಬೆಂಬಲಿಗರು, ಹಿತೈಷಿಗಳೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿರುವುದಾಗಿ ಸುಮಲತಾ ಹೇಳಿದರು.

RELATED ARTICLES

Latest News