Friday, November 22, 2024
Homeರಾಜ್ಯಧಮ್ಕಿ, ಬೆದರಿಸುವುದು ಕಾಂಗ್ರೆಸ್‍ನವರ ಅಭ್ಯಾಸ: ಕುಮಾರಸ್ವಾಮಿ

ಧಮ್ಕಿ, ಬೆದರಿಸುವುದು ಕಾಂಗ್ರೆಸ್‍ನವರ ಅಭ್ಯಾಸ: ಕುಮಾರಸ್ವಾಮಿ

ಬೆಂಗಳೂರು,ಫೆ.27- ರಾಜ್ಯಸಭೆ ಚುನಾವಣೆಯಲ್ಲಿ ಸೋಲು-ಗೆಲುವಿಗಿಂತಲೂ ಮುಖ್ಯವಾಗಿ ನಮ್ಮ ಪಕ್ಷದ ಶಾಸಕರ ನಿಷ್ಠೆ ಮತ್ತು ಪ್ರಾಮಾಣಿಕತೆಯ ಸಾಬೀತಿಗಾಗಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾಗಿ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿಂದು ರಾಜ್ಯಸಭೆ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾದ ಆರಂಭದಲ್ಲೇ ಜೆಡಿಎಸ್‍ನಿಂದ 12 ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ಮಾಡುತ್ತಿದ್ದರು. ನೀವು 13ನೇಯವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಎಂದು ನಮ್ಮ ಶಾಸಕರಿಗೆ ಕರೆ ಮಾಡಲಾಗುತ್ತಿತ್ತು. ಕೆಲವರಿಗೆ ಅಭಿವೃದ್ಧಿಗೆ ಹಣ ನೀಡುತ್ತೇವೆ ಎಂಬ ಆಮಿಷವನ್ನು ಒಡ್ಡಿದ್ದರು. ಅದರಲ್ಲಿ ಕಾಂಗ್ರೆಸ್ಸಿಗರು ಎಷ್ಟು ಯಶಸ್ವಿಯಾಗಿದ್ದಾರೆ ಎಂಬುದನ್ನು ಪರಿಶೀಲಿಸಲು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯಸಭೆ ಮಾಜಿ ಸದಸ್ಯ ಡಿ. ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಲಾಗಿದೆ ಎಂದರು.

ಇಲ್ಲಿ ಸೋಲು-ಗೆಲುವಿನ ಪ್ರಶ್ನೆಯಿಲ್ಲ. ಬಿಜೆಪಿ-ಜೆಡಿಎಸ್‍ನ ಮೈತ್ರಿಯ ಬಳಿಕ ಇದು ಎರಡನೇ ಸೋಲು ಎಂಬ ವ್ಯಾಖ್ಯಾನವೂ ಸರಿ ಇಲ್ಲ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬೇರೆ ರೀತಿಯ ಕಾರಣಗಳಿವೆ. ಬೆಳ್ಳಿ ಬಟ್ಟಲು ಹಂಚಿದ್ದಾರೆ. ಜೊತೆಗೆ ಶಿಕ್ಷಕರ ಕ್ಷೇತ್ರದ ಮತದಾರರಲ್ಲಿ ಅನುದಾನಿತ ಶಾಲೆಗಳ ಪ್ರಮಾಣ ಹೆಚ್ಚಿತ್ತು. ಅವರನ್ನು ಹೆದರಿಸಿ ಬ್ಲಾಕ್‍ಮೇಲ್ ಮಾಡುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದರು.

ಕುಟುಂಬ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ಆದರೆ ಜೆಡಿಎಸ್‍ನ 19 ಶಾಸಕರು ಒಟ್ಟಾಗಿದ್ದಾರೆ. ಶರಣಗೌಡ ಕಂದಕೂರ್, ಕರೆಮ್ಮ ಸೇರಿದಂತೆ ನಮ್ಮ ಪಕ್ಷದ ಎಲ್ಲಾ ಶಾಸಕರು ಒಂದು ಕುಟುಂಬವಾಗಿ ಒಟ್ಟಾಗಿದ್ದೇವೆ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕರಿಗೆ ಧಮ್ಕಿ ಹಾಕಿ ಬೆದರಿಸಿ ಮತ ಕೇಳಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಮ್ಮದು ಆ ಸಂಸೃತಿ ಅಲ್ಲ. ಧಮ್ಕಿ ಹಾಕುವುದು, ಬೆದರಿಸುವುದು ಕಾಂಗ್ರೆಸ್‍ನವರ ಅಭ್ಯಾಸಗಳು ಎಂದು ತಿರುಗೇಟು ನೀಡಿದರು.

RELATED ARTICLES

Latest News