ಬೆಂಗಳೂರು, ಮೇ 10- ಲೋಕದ ಡೋಂಕ ನೀವೇಕೆ ತಿದ್ದುವರಿ, ನಿಮ್ಮ ನಿಮ್ಮ ತನುವ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ಮೊದಲು ನಿಮ್ಮ ಮನೆಯನ್ನು ಸರಿ ಪಡಿಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
ಬಸವ ಜಯಂತಿ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಪೆನ್‌ಡ್ರೈವ್ ಪ್ರಕರಣಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿರುವ ಕುರಿತು ಉತ್ತರಿಸಿ, ಇಂದು ಬಸವಣ್ಣನವರ ಕೆಲಸ. ಇಲ್ಲಿ ಬೇರೆ ವಿಚಾರಗಳ ಚರ್ಚೆ ಸೂಕ್ತವಲ್ಲ. ಬಸವಣ್ಣ ಏನು ಹೇಳಿದ್ದಾರೆ. ಲೋಕದ ಡೋಂಕ ನೀವೇಕೆ ತಿದ್ದುವರಿ, ನಿಮ ನಿಮ ತನುವ, ನಿಮ ನಿಮ ಮನವ ಸಂತೈಸಿಕೊಳ್ಳಿ ಎಂದಿದ್ದಾರೆ. ಬೇರೆಯವರ ಮೇಲೆ ಏಕೆ ಜವಾಬ್ದಾರಿ ಹೊರಿಸುತ್ತಿರಿ.
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಮೊದಲು ನಿಮ ಮನೆ ರಿಪೇರಿ ಮಾಡಿಕೊಳ್ಳಿ ಎಂದರು. ಈ ವೇಳೆ ಬಸವಣ್ಣನವರ ವಚನವನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಡಿ.ಕೆ.ಶಿವಕುಮಾರ್ ಅವರಿಗೆ ನೆನಪಿಸಿದರು.
ಬೇರೆಯವರ ಬಗ್ಗೆ ಏಕೆ ಮಾತನಾಡುತ್ತಿರಿ. ಲೋಕದ ಡೋಂಕನ್ನು ತಿದ್ದಿಕೊಳ್ಳಿ ಎಂದು ಬಸವಣ್ಣ ಹೇಳಿದ್ದಾರೆ. ನಾವು ಅದನ್ನು ಪಾಲಿಸೋಣ. ಮಿಕ್ಕ ವಿಚಾರವನ್ನು ನಂತರ ಮಾತನಾಡೋಣ. ರಾಜ್ಯಪಾಲರಿಗೆ ದೂರು ನೀಡಿರುವ ಕುಮಾರಸ್ವಾಮಿಯವರಿಗೆ ಶುಭವಾಗಲಿ ಎಂದು ಹಾರೈಸುವುದಾಗಿ ಹೇಳಿದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ಬಹಳ ದಿನಗಳ ನಂತರ ರಾಷ್ಟ್ರೀಯ ಮಹಿಳಾ ಆಯೋಗ ಪ್ರತಿಕ್ರಿಯೆ ನೀಡಿದೆ. ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗ ರಾಜಕೀಯ ಹೊರತಾಗಿ ಕೆಲಸ ನಿರ್ವಹಿಸಲಿ ಎಂದಷ್ಟೆ ಹೇಳುವುದಾಗಿ ತಿಳಿಸಿದರು.
ಸಮಾನತೆಯ ಸಮಾಜಕ್ಕೆ ಪ್ರೇರಣೆ:
ಮೊದಲನೇಯ ಸಂಸತ್ ಅನ್ನು ಬಸವಕಲ್ಯಾಣದಲ್ಲಿ ಬಸವಣ್ಣ ಆರಂಭಿಸಿದರು. ಅದರ ಬುನಾದಿಯಲ್ಲೇ ನಾವು ನಡೆದುಕೊಳ್ಳುತ್ತಿದ್ದೇವೆ. ಜಾತಿ ಧರ್ಮ ಇಲ್ಲದೆ ಸಮಾನತೆಯನ್ನು ಬಸವಣ್ಣ ಪ್ರತಿಪಾದಿಸಿದರು. ನಮ ಸರ್ಕಾರದ ಕಾರ್ಯಕ್ರಮಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ಅಕ್ಷರ, ಅನ್ನ ದಾಸೋಹ, ಮಹಿಳಾ ಸಬಲೀಕರಣಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಎಲ್ಲಾ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಟ್ಟು, ಬಸವ ಜಯಂತಿ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ಕೇವಲ ಮಾತಿನಲ್ಲಷ್ಟೆ ಅಲ್ಲ. ನಡೆಯಲ್ಲಿಯೂ ಬಸವ ತತ್ವಗಳನ್ನು ಅನುಸರಿಸುತ್ತಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.