Monday, May 20, 2024
Homeರಾಜ್ಯಪೆನ್‌ಡ್ರೈವ್‌ ಪ್ರಕರಣದ ತನಿಖೆಯಲ್ಲಿ ನಾನಾಗಲಿ ಅಥವಾ ಡಿ.ಕೆ.ಶಿವಕುಮಾರ್‌ ಆಗಲಿ ಹಸ್ತಕ್ಷೇಪ ಮಾಡಿಲ್ಲ : ಸಿಎಂ

ಪೆನ್‌ಡ್ರೈವ್‌ ಪ್ರಕರಣದ ತನಿಖೆಯಲ್ಲಿ ನಾನಾಗಲಿ ಅಥವಾ ಡಿ.ಕೆ.ಶಿವಕುಮಾರ್‌ ಆಗಲಿ ಹಸ್ತಕ್ಷೇಪ ಮಾಡಿಲ್ಲ : ಸಿಎಂ

ಮೈಸೂರು, ಮೇ 10- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಥವಾ ನನ್ನ ಹಸ್ತಕ್ಷೇಪ ಇಲ್ಲ ಎಂದು ಸ್ಪಷ್ಟ ಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಿಖೆ ನಡೆಸುತ್ತಿರುವ ಎಸ್‌‍ಐಟಿ ಮೇಲೆ ಸಂಪೂರ್ಣ ನಂಬಿಕೆ ಇದೆ. ಸಿಬಿಐಗೆ ವಹಿಸುವ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್‌ ಪ್ರಕರಣದ ತನಿಖೆಗೆ ಈಗಾಗಲೇ ಎಸ್‌‍ಐಟಿ ರಚನೆ ಮಾಡಲಾಗಿದೆ. ನನಗೆ ನಮ ಪೊಲೀಸರ ಮೇಲೆ ನಂಬಿಕೆ ಇದೆ. ಅವರು ಕಾನೂನು ರೀತಿಯಲ್ಲಿ ತನಿಖೆ ಮಾಡಿ ವರದಿ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಈ ಹಿಂದೆ ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು. ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐ ಒಪ್ಪಿಸಿರಲಿಲ್ಲ. ಸಿಬಿಐ ಎಂದರೆ ಕರೆಷ್ಪನ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ ಎಂದು ಬಿಜೆಪಿಯವರು ಹೇಳುತ್ತಿದ್ದರು. ದೇವೇಗೌಡರು ಚೋರ್‌ ಬಜಾವೋ ಸಂಸ್ಥೆ ಎಂದು ಟೀಕಿಸುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಸಿಬಿಐ ಮೇಲೆ ಪ್ರೀತಿ ಬಂದಿದೆ ಎಂದು ಲೇವಡಿ ಮಾಡಿದರು.

ನಮ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಎಸ್‌‍ಐಟಿ ನಿಷ್ಪಕ್ಷಪಾತವಾಗಿ ಹಾಗೂ ಕಾನೂನಾತಕವಾಗಿ ತನಿಖೆ ನಡೆಸಲಿದೆ ಎಂಬ ವಿಶ್ವಾಸವಿದೆ. ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿ ಎಂದು ನಾನು ಪೊಲೀಸರಿಗೆ ಯಾವತ್ತೋ ಹೇಳಿಲ್ಲ. ಹೇಳುವುದು ಇಲ್ಲ. ಎಸ್‌‍ಐಟಿಯಲ್ಲಿರುವುದು ನಮ ಪೊಲೀಸರು. ಅವರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಅವರು ಸತ್ಯಾಸತ್ಯತೆ ಪತ್ತೆ ಹಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಹಿಂದೆ ಡಿ.ಕೆ.ರವಿ, ಲಾಟರಿ, ಕೆ.ಜೆ.ಜಾರ್ಜ್‌, ಪರೇಶ್‌ ಮೆಸ್ತಾ ಸೇರಿದಂತೆ ಹಲವು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇವು. ಒಂದರಲ್ಲಾದರೂ ಶಿಕ್ಷೆ ಆಯಿತೆ. ಹಾಗೇಂದ ಮಾತ್ರಕ್ಕೆ ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂದರ್ಥವಲ್ಲ ಎಂದರು.
ಪೆನ್‌ಡ್ರೈವ್‌ ಪ್ರಕರಣದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ವ್ಯಾಪ್ತಿಯಿಲ್ಲ. ಸಿಬಿಐ ತನಿಖೆಗೆ ಕೇಳುವ ಸಲುವಾಗಿ ಆಸ್ಟ್ರೇಲಿಯಾ, ಮಲೇಶಿಯಾದಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ತನಿಖೆಯಲ್ಲಿ ಯಾರ ಹಸ್ತಕ್ಷೇಪ ಇಲ್ಲ. ನಮಗೆ ನಮ ಪೊಲೀಸರ ಮೇಲೆ ನಂಬಿಕೆ ಇಲ್ಲದೆ ಇದ್ದರೆ ಹೇಗೆ ? ತನಿಖೆಗೆ ಕಾಲಾವಕಾಶ ನೀಡಬೇಕಲ್ಲವೇ ? ಎಂದರು.

ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣ ಸತ್ಯಾಂಶ ಇಲ್ಲ ಎಂದಾದ ಮೇಲೆ ನಿರೀಕ್ಷಣಾ ಜಾಮೀನಿಗೆ ಯಾಕೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಜಾಮೀನು ಅರ್ಜಿಯನ್ನು ಯಾಕೆ ವಜಾಗೊಳಿಸಿತ್ತು. ಸುಳ್ಳು ಎಫ್‌ಐಆರ್‌ ಎಂದ ಮೇಲೆ ಜಾಮೀನು ಕೊಡಬೇಕಿತ್ತಲ್ಲ ಎಂದು ವಾದಿಸಿದರು.

ನೀತಿ ಸಂಹಿತೆ ಇರುವುದರಿಂದ ಇಂದು ತಾವು ಬಸವ ಜಯಂತಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಬಸವಣ್ಣ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಬಸವಣ್ಣ ಅವರ ಆದರ್ಶಗಳನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದರು.

ಎಸ್‌‍ಎಸ್‌‍ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಮೈಸೂರು 5 ಸ್ಥಾನಕ್ಕೆ ಬರಬೇಕು ಎಂದು ಸೂಚಿಸಲಾಗಿತ್ತು. ಈ ಸಾಲಿನಲ್ಲಿ 7ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೆ ಏರಲು ಕ್ರಮ ಕೈಗೊಳ್ಳಲಾಗುವುದು ಎಂದರು.ಬಾಗಲಕೋಟೆಯ ಮುಧೋಳ್‌ನ ಮೋರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವುದು ಶ್ಲಾಘನಾರ್ಹ. ವಸತಿ ಶಾಲೆಗಳ ಹೆಚ್ಚು ವಿದ್ಯಾರ್ಥಿಗಳು ಇದೇ ರೀತಿಯ ಸಾಧನೆ ಮಾಡಲಿ ಎಂದು ಹಾರೈಸಿದರು.

1994ರಲ್ಲಿ ತಾವು ಹಣಕಾಸು ಸಚಿವರಾಗಿದ್ದಾಗ ಗ್ರಾಮೀಣ ಭಾಗದ ಮಕ್ಕಳು, ದಲಿತರು, ಹಿಂದುಳಿದ ವರ್ಗಗಳ, ರೈತರ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಮೋರಾರ್ಜಿ ಶಾಲೆಗಳನ್ನು ಆರಂಭಿಸಲಾಯಿತು. ಆ ಸಂದರ್ಭದಲ್ಲಿ ದಲಿತ ಸಂಘಟನೆಗಳು ನಮಗೆ ಸಾರಾಯಿ, ಹೆಂಡದ ಅಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂಬ ಘೋಷಣೆಗಳನ್ನು ಮೊಳಗಿಸುತ್ತಿದ್ದರು. ನನಗೆ ದಲಿತ ಸಂಘರ್ಷ ಸಮಿತಿಯ ಜೊತೆಗೆ ಸಂಪರ್ಕ ಇತ್ತು. ಖುದ್ದು ನಾನು ಗ್ರಾಮೀಣ ಭಾಗದವನಾಗಿದ್ದೆ. ಹಾಗಾಗಿ ವಸತಿ ಶಾಲೆಗಳನ್ನು ಆರಂಭಿಸಿದ್ದೆ. ಇಂದು ಹೋಬಳಿಗೊಂದರಂತೆ 900ಕ್ಕೂ ಹೆಚ್ಚು ವಸತಿ ಶಾಲೆಗಳಿವೆ ಎಂದರು.

RELATED ARTICLES

Latest News