ನವದೆಹಲಿ, ಡಿ.4– ಹಾಸನದಲ್ಲಿ ಕಾಂಗ್ರೆಸ್ ನಡೆಸಲಿರುವ ಸಮಾವೇಶದ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ಜೆಡಿಎಸ್ ಗುರಿಯಾಗಿಸಿಕೊಂಡು ಸಮಾವೇಶ ಮಾಡುವುದಾದರೆ ಮಾಡಲಿ ಎಂದು ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ.ರೇವಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಜೆಡಿಎಸ್ ಗುರಿಯಾಗಿಟ್ಟುಕೊಂಡು ಏನೇನು ಮಾಡುತ್ತಾರೋ ಮಾಡಲಿ. ನಾವು ಕೂಡ ಇದಕ್ಕೆಲ್ಲ ತಯಾರಿದ್ದೇವೆ. ಆದರೆ, 2028ರ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಜೆಡಿಎಸ್ ಗುರಿ ಮಾಡಲು ಹೋಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಏನಾಯಿತು ಎಂಬುದು ಗೊತ್ತಿದೆ.ಆಗ ಕಾಂಗ್ರೆಸ್ನವರೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ಬರಬೇಕಾಯಿತು ಅಲ್ಲವೇ? ಎಂದು ಅವರು ಪ್ರಶ್ನಿಸಿದರು.
ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಾನು 2028ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಕಾಂಗ್ರೆಸ್ನವರು ಸಮಾವೇಶ ಮಾಡಲಿ, ಜೊತೆಗೆ ಹಾಸನ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಲಿ ನಮ ತಕರಾರು ಏನೂ ಇಲ್ಲ. ಆದರೆ, ಕಳೆದ 50 ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂದರು.
ಈಗಾಗಲೇ ನಾವು ಸೋಲು-ಗೆಲುವನ್ನು ಹಲವು ಬಾರಿ ನೋಡಿದ್ದೇವೆ. ಸಮಾವೇಶ ನಡೆಸುವುದಕ್ಕೆಲ್ಲಾ ನಾವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಸನ ಹೊರ ವರ್ತುಲ ರಸ್ತೆ, ರೈಲ್ವೆ ಸೇತುವೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ನೆರವು ಕೋರಿರುವುದಾಗಿ ಅವರು ಹೇಳಿದರು.
ನಮನ್ನು ಮುಗಿಸೋದು ದೇವರು ಮತ್ತು ಜನರು. ವಿಧಾನಸಭಾ ಚುನಾವಣೆ ನಡೆದ ಒಂದೇ ವರ್ಷಕ್ಕೆ ನಡೆದ ಲೋಕಸಭಾ ಚುನಾವಣೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ತಿಳಿಸಿದರು.