ಮುಂಬೈ,ಡಿ.4- ಫಲಿತಾಂಶ ಹೊರಬಿದ್ದು 13 ದಿನಗಳ ಬಳಿಕ ಮಹಾ ರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಕೊನೆಗೂ ಸುಖಾಂತ್ಯ ಕಂಡಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನಾವೀಸ್ ಆಯ್ಕೆಯಾಗಿದ್ದು, ಅವರೇ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವ ನಾಯಕ ದೇವೇಂದ್ರ ಫಡ್ನಾವೀಸ್ ನೂತನ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಜೊತೆಗೆ ಮಾಜಿ ಮುಖ್ಯಮಂತ್ರಿ ಶಿವಸೇನೆಯ ಮುಖಂಡ ಏಕ್ ನಾಥ್ ಶಿಂಧೆ ಹಾಗೂ ಎನ್ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕಾರ ಮಾಡುವರು. ಅಧಿಕಾರ ಹಂಚಿಕೆ ಮುಗಿದ ಬಳಿಕ ಸಚಿವ ಸಂಪುಟ ಮುಂದಿನ ವಾರದಲ್ಲಿ ನಡೆಯಲಿದೆ.
ಮುಂಬೈನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಫಡ್ನಾವೀಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ವಿಜಯ್ ರೂಪಾನಿ ಅನುಮೋದಿಸಿದ್ದಾರೆ. ಇಂದು ಸಂಜೆ ಮಹಾಯುತಿಯ ನಾಯಕರು ರಾಜ್ಯಪಾಲ ಸಿ.ಕೆ .ರಾಧಕೃಷ್ಣನ್ ಅವರನ್ನು ಭೇಟಿಯಾಗಿ ಸರ್ಕಾರದ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ.
ಫಡ್ನಾವೀಸ್, ಶಿಂಧೆ ಮತ್ತು ಪವಾರ್ ಅವರು ನಾಳೆ ಸಂಜೆ 5 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಸರ್ಕಾರ ರಚನೆ, ಅಧಿಕಾರದ ಹಂಚಿಕೆ ಸೂತ್ರ ಕುರಿತಂತೆ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಹಾಗೂ ಮಾಜಿ ಡಿಸಿಎಂ ದೇವೇಂದ್ರ ಫಡ್ನಾವೀಸ್ನಡುವೆ ನಡೆದ ಮಾತುಕತೆಯಲ್ಲಿ ಬಿಕ್ಕಟ್ಟು ಇತ್ಯರ್ಥಗೊಂಡಿದೆ.
ಮೈತ್ರಿ ನಾಯಕನ ಆಯ್ಕೆಯ ಕಗ್ಗಂಟಿನ ನಡುವೆ ಮಹಾಯುತಿ ಮೈತ್ರಿ ಸರ್ಕಾರ ರಚನೆ, ಅಧಿಕಾರ ಹಂಚಿಕೆ ಸೂತ್ರ ಕುರಿತಂತೆ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಹಾಗೂ ಮಾಜಿ ಡಿಸಿಎಂ ದೇವೇಂದ್ರ ಫಡ್ನಾವೀಸ್ ನಡುವೆ ಮಾತುಕತೆಯಲ್ಲಿ ಬಿಕ್ಕಟ್ಟು ಇತ್ಯರ್ಥಗೊಂಡಿದ್ದು, ಡಿಸಿಎಂ ಸ್ಥಾನ ವಹಿಸಿಕೊಳ್ಳಲು ಶಿಂಧೆ ಸಮತಿಸಿದ್ದಾರೆ.
ಸಿಎಂ ಆಯ್ಕೆ, ಸಚಿವ ಸ್ಥಾನ, ಖಾತೆಗಳ ಹಂಚಿಕೆ ಬಗ್ಗೆ ಸಮಾಲೋಚಿಸಿದರು. ಉಭಯ ನಾಯಕರ ನಡುವೆ ನಡೆದ ಮಾತುಕತೆ ಬಳಿಕ ಮಹಾಯುತಿ ಮೈತ್ರಿಯಲ್ಲಿ ಮೂಡಿದ್ದ ಬಿಕ್ಕಟ್ಟು ಇತ್ಯರ್ಥಗೊಂಡಿದ್ದು, ಶಿವಸೇನೆ ಮೈತ್ರಿ ಸರ್ಕಾರದ ಭಾಗವಾಗಿ ಕಾರ್ಯ ನಿರ್ವಹಿಸಲು ಏಕನಾಥ್ ಶಿಂಧೆ ಸಮತಿಸಿದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರ ರಚನೆ ಬಳಿಕ ಸಚಿವ ಸ್ಥಾನ, ಖಾತೆ ಹಂಚಿಕೆ ಕುರಿತು ಅಂತಿಮ ಮಾತುಕತೆ ನಡೆಯಲಿದೆ. ಮಹಾಯುತಿ ಮೈತ್ರಿ ನಾಯಕನ ಆಯ್ಕೆಗೆ ನ.29 ರಂದು ದಿಲ್ಲಿಯಲ್ಲಿ ನಡೆದ ಅಪೂರ್ಣ ಸಭೆ ಬಳಿಕ ದಿಢೀರ್ ತವರು ಜಿಲ್ಲೆ ಸತಾರಾಗೆ ತೆರಳಿದ್ದ ಏಕನಾಥ್ ಶಿಂಧೆ ನಡೆಯಿಂದ ಸಿಎಂ ಆಯ್ಕೆ ಕಗ್ಗಂಟಾಗಿತ್ತು.
ಸರ್ಕಾರ ರಚನೆ ಸೂತ್ರ :
ಗೃಹ, ಕಂದಾಯ ಸೇರಿ 21-22 ಸಚಿವಾಲಯಗಳು ಬಿಜೆಪಿ ಪಾಲಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಜತೆಗೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಶಿವಸೇನೆಯು ಸಂಪುಟದಲ್ಲಿ 16 ಸಚಿವಾಲಯಗಳನ್ನು ನೀಡುವಂತೆ ಬೇಡಿಕೆಯಿಟ್ಟಿದೆ. ಆದರೆ, ನಗರಾಭಿವೃದ್ಧಿ ಸೇರಿ 12 ಖಾತೆಗಳಷ್ಟೇ ಶಿವಸೇನೆಗೆ ಸಿಗುವ ಸಾಧ್ಯತೆಯಿದೆ. ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಶಿವಸೇನೆ ಪೈಪೋಟಿ ನಡೆಸುತ್ತಿದ್ದು, ಈಗಾಗಲೇ ಉಪ ಸಭಾಪತಿ ಸ್ಥಾನವನ್ನು ಅಲಂಕರಿಸಿದೆ.
ಹಣಕಾಸು, ಡೆಪ್ಯುಟಿ ಸ್ಪೀಕರ್ ಸೇರಿ 9-10 ಸಚಿವಾಲಯಗಳು ಎನ್ಸಿಪಿಗೆ ಲಭಿಸುವ ಸಾಧ್ಯತೆಯಿದೆ. ಮುಂಬೈನ ಆಜಾದ್ ಮೈದಾನದಲ್ಲಿ ಮೂವರು ನಾಯಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನೂತನ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಎರಡೂವರೆ ಸಾವಿರ ಮುಂಬೈ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಇದಲ್ಲದೆ, ಕಾರ್ಯಪಡೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ಇತರ ಭದ್ರತಾ ಏಜೆನ್ಸಿಗಳನ್ನು ಸಹ ಅಲರ್ಟ್ ಮಾಡಲಾಗಿದೆ.
ನ.20 ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಆಡಳಿತಾರೂಢ ಮಹಾಯುತಿಯ ಬೃಹತ್ ವಿಜಯದ ನಂತರ, ಮಹಾರಾಷ್ಟ್ರದ ಹೊಸ ಸರ್ಕಾರವು ಡಿ.5 ರಂದು ಪ್ರಮಾಣವಚನ ಸ್ವೀಕರಿಸಲಿದೆ.
ಫಡ್ನಾವೀಸ್ ಯಾರು? :
ನೀರು ಬತ್ತಿ ಹೋಗಿದೆ ಎಂದು ದಡದಲ್ಲಿ ಮನೆ ಕಟ್ಟಬೇಡಿ ನಾನು ಸಾಗರ ಮತ್ತೆ ಹಿಂದಿರುಗುತ್ತೇನೆ ಎಂದು 2019ರಲ್ಲಿ ಫಡ್ನಾವೀಸ್ ಈ ಸಾಲುಗಳನ್ನು ಹೇಳಿದ್ದರು.
ದೇವೇಂದ್ರ ಫಡ್ನಾವೀಸ್ ಅವರು ಸಿಎಂ ಆಗಿ ಆಯ್ಕೆಯಾದಾಗ ಆ 5 ವರ್ಷಗಳ ಹಿಂದಿನ ಸಾಲು ಸಂಪೂರ್ಣವಾಗಿ ಸರಿ ಎಂದು ಸಾಬೀತಾಗಿದೆ. ದೇವೇಂದ್ರ ಫಡ್ನಾವೀಸ್ ಅವರು ಸಂಪೂರ್ಣ ಸ್ಥಾನಮಾನ ಮತ್ತು ಪ್ರಭಾವದೊಂದಿಗೆ ಮಹಾರಾಷ್ಟ್ರ ರಾಜಕೀಯಕ್ಕೆ ಮರಳಿದ್ದಾರೆ.
ಈಗ ಮಹಾರಾಷ್ಟ್ರದ ಅಧಿಕಾರ ಅವರ ಕೈಯಲ್ಲಿರುತ್ತದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರ ಹೆಸರನ್ನು ಅನುಮೋದಿಸಲಾಗಿದೆ. ದೇವೇಂದ್ರ ಫಡ್ನಾವೀಸ್ ಮೂರನೇ ಬಾರಿಗೆ ಮಹಾರಾಷ್ಟ್ರದ ಸಿಎಂ ಆಗಲಿದ್ದಾರೆ. ಫಡ್ನಾವೀಸ್ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ವನವಾಸ 2014 ರಲ್ಲಿ ಕೊನೆಗೊಂಡಿತ್ತು.
ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಿಜೆಪಿಯ ಏಕೈಕ ಮುಖ್ಯಮಂತ್ರಿ ಅವರು. ದೇವೇಂದ್ರ ಫಡ್ನವೀಸ್ ಅವರ ರಾಜಕೀಯ ಪಯಣ ನೇರವಾಗಿ ಶಾಸಕ ಅಥವಾ ಸಿಎಂ ಹ್ದುೆಯಿಂದ ಆರಂಭವಾಗಿಲ್ಲ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಕ್ರಿಯ ರಾಜಕಾರಣಕ್ಕೆ ಬಂದವರು. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಸದಸ್ಯರಾಗಿದ್ದಾರೆ. ಎಬಿವಿಪಿ ಸದಸ್ಯರಾಗಿದ್ದಾಗಲೇ ಪ್ರಥಮ ಬಾರಿಗೆ ನಗರಸಭೆಯಲ್ಲಿ ಕೌನ್ಸಿಲರ್ ಆದರು. ಕೇವಲ 5 ವರ್ಷಗಳ ನಂತರ, ಅವರು ನಾಗ್ಪುರದ ಮೇಯರ್ ಆದರು. ಮರಾಠಾ ಚಳವಳಿಯನ್ನು ಚೆನ್ನಾಗಿ ನಿಭಾಯಿಸಿದ್ದರು.
ತಮ 44 ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಎರಡನೇ ಅತಿ ಕಿರಿಯ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ದೇವೇಂದ್ರ ಫಡ್ನಾವೀಸ್ 1999 ಮತ್ತು 2014 ರಲ್ಲಿ ನಾಗ್ಪುರ ಸೌತ್ ವೆಸ್ಟ್ನಿಂದ ಶಾಸಕರಾಗಿದ್ದರು. ಇದಾದ ನಂತರ ಬಿಜೆಪಿ ಶಾಸಕರು ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದ 1960 ರಲ್ಲಿ ಮಹಾರಾಷ್ಟ್ರ ರಚನೆಯಾದ ನಂತರ, ರಾಜ್ಯದಲ್ಲಿ 17 ಮುಖ್ಯಮಂತ್ರಿಗಳಿದ್ದರು. ಆದರೆ ಅವರಲ್ಲಿ ಇಬ್ಬರು ಮಾತ್ರ ತಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು.
ಅವರಲ್ಲಿ ದೇವೇಂದ್ರ ಫಡ್ನಾವೀಸ್ ಕೂಡ ಒಬ್ಬರು. ಈ ಮೊದಲು ವಸಂತರಾವ್ ನಾಯಕ್ ಮಾತ್ರ ತಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಅವರು ಕಾಂಗ್ರೆಸ್ ನಾಯಕರಾಗಿದ್ದರು. ಫಡ್ನಾವೀಸ್ ಅವರು ಸಂಘದೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದಾರೆ. ಕಳೆದ 30 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ.