ಬೆಂಗಳೂರು, ಮೇ 7- ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ ಮುಂದೂಡಿದೆ.ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಎಚ್. ಡಿ. ರೇವಣ್ಣ ಅವರು ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಸಂತೋಷ್ ಗಜಾನಂದ್ ಭಟ್ ಅವರು ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ಜಾಮೀನು ಅರ್ಜಿ ವಿಚಾರಣೆ ನಡೆಸಬುಹುದೇ ಎಂದು ಪ್ರಶ್ನಿಸಿ ಎಸ್‌ಐಟಿ ಹಾಗೂ ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ.
ಎಚ್.ಡಿ. ರೇವಣ್ಣ ಅವರ ಪರವಾಗಿ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲು ಜಾಮೀನು ಪಡೆಯಲು ಅವಕಾಶವಿದೆ ಎಂದು ಕಾನೂನಿನಲ್ಲಿರುವ ಹಲವು ಅವಕಾಶಗಳನ್ನು ಉಲ್ಲೇಖಿಸಿದರು. ಅಲ್ಲದೇ ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ಉಲ್ಲೇಖಿಸಿ ಜಾಮೀನು ನೀಡುವ ಸಾಧ್ಯತೆಯನ್ನು ಪ್ರತಿಪಾದಿಸಿದರು.
ರೇವಣ್ಣ ಅವರನ್ನು ಈಗಾಗಲೇ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಕಸ್ಟಡಿಯಲ್ಲಿರುವಾಗ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದೇ? ಈ ಆಕ್ಷೇಪಣೆ ಇದ್ದರೆ ಸಲ್ಲಿಸಲು ಸರ್ಕಾರಿ ಪರ ವಕೀಲರಿಗೆ ಸೂಚನೆ ನೀಡಿ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಲೈಂಗಿಕ ದೌರ್ಜನ್ಯಕ್ಕೆ ಈಡಾದ ಮಹಿಳೆಯ ಆಪಹರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ. ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಾಲಯ ನಾಲ್ಕು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿತ್ತು. ನಾಳೆಗೆ ಎಸ್‌ಐಟಿ ಕಸ್ಟಡಿ ಅವಧಿ ಮುಗಿಯಲಿದೆ.