Sunday, May 19, 2024
Homeರಾಜ್ಯಸಾಲಲ್ಲಿ ನಿಂತು ಮತದಾನ ಮಾಡಿದ ಗಣ್ಯಾತಿಗಣ್ಯರು

ಸಾಲಲ್ಲಿ ನಿಂತು ಮತದಾನ ಮಾಡಿದ ಗಣ್ಯಾತಿಗಣ್ಯರು

ಬೆಂಗಳೂರು, ಮೇ 7- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌‍. ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು, ಮಾಜಿ ಸಚಿವರು ಹಲವು ಗಣ್ಯಾತಿ ಗಣ್ಯರು ಮತದಾನ ಮಾಡಿದರು. ರಾಜ್ಯದಲ್ಲಿ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಅಭ್ಯರ್ಥಿಗಳು, ಗಣ್ಯರು, ಮುಖಂಡರು ಬೆಳಿಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಲುಬುರಗಿಯ ಬಸವನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಮತಚಲಾಯಿಸಿದರು. ಸಚಿವರಾದ ಪ್ರಿಯಾಂಕ ಖರ್ಗೆ, ಅಭ್ಯರ್ಥಿ ರಾಧಾಕೃಷ್ಣ ಅವರು ಕೂಡ ತಮ ಪರಿವಾರದೊಂದಿಗೆ ಆಗಮಿಸಿ ಮತದಾನ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡಿಯೂರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ತಮ ಕುಟುಂಬದವರೊಂದಿಗೆ ಆಗಮಿಸಿ ಶಿಕಾರಿಪುರ ಆಡಳಿತ ಭವನದ ಬೂತ್‌ ನಂ.137 ರಲ್ಲಿ ಮತದಾನದ ಹಕ್ಕು ಚಲಾಯಿಸಿದರು.

ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಅವರು ಹುಬ್ಬಳ್ಳಿಯ ಭವಾನಿನಗರದಲ್ಲಿರುವ ಕಿವುಡ-ಮೂಕರ ಶಾಲೆಯಲ್ಲಿ ಮತದಾನ ಮಾಡಿದರು.ವಿಜಯಪುರದ ಕಾಂಗ್ರೆಸ್‌‍ ಅಭ್ಯರ್ಥಿ ರಾಜುಅಲಗೂರು ಅವರು ಸ್ವಗ್ರಾಮ ತೊರವಿಯ ಸರ್ಕಾರಿ ಶಾಲೆಯಲ್ಲಿ ಮತಚಲಾಯಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾವಿ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮಾಯಿ ಅವರು ಮುಂಜಾನೆಯೇ ತಮ ಪರಿವಾರದೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು.ಬಾಗಲಕೋಟೆಯ ಕಾಂಗ್ರೆಸ್‌‍ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ವಿಜಯಪುರದ ಮರಾಠಿ ಸರ್ಕಾರಿ ಶಾಲೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಚಿಕ್ಕೋಡಿ ಕಾಂಗ್ರೆಸ್‌‍ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ತಾಲ್ಲೂಕಿನ ಹಳೇವಂಟಮೂರಿ ಗ್ರಾಮದಲ್ಲಿ ತಮ್ಮ ಸೋದರನೊಂಧಿಗೆ ಆಗಮಿಸಿ ಮತದಾನ ಮಾಡಿದರು.ಬೆಳಗಾವಿಯ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ತಮ್ಮ ಬೀಗರಾದ ಮಾಜಿ ಸಂಸದೆ ಮಂಗಳ ಅಂಗಡಿ ಹಾಗೂ ಸೊಸೆ ಶ್ರದ್ಧಾ ಶೆಟ್ಟರ್‌ ಅವರೊಂದಿಗೆ ಆಗಮಿಸಿ ಬೆಳಗಾವಿ ಮತಗಟ್ಟೆ 26ರಲ್ಲಿ ಮತಚಲಾಯಿಸಿದರು.

ಉತ್ತರಕನ್ನಡದ ಕಾಂಗ್ರೆಸ್‌‍ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಖಾನಾಪುರ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು. ಸಚಿವರಾದ ಲಕ್ಷ್ಮೀಹೆಬ್ಬಾಳ್ಕರ್‌ ಅವರು ತಮ ಪುತ್ರ ಹಾಗೂ ಕೈ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್‌ ಮತ್ತು ಸೋದರ ಚೆನ್ನರಾಜ್‌ ಹಟ್ಟಿಹೊಳಿ ಅವರೊಂದಿಗೆ ಆಗಮಿಸಿ ಹಿಂಡಲಗಾ ಸಮೀಪದ ವಿಜಯನಗರದ ಕನ್ನಡ-ಮರಾಠಿ ಶಾಲೆಯಲ್ಲಿ ಮತ ಚಲಾಯಿಸಿದರು.

ಮಾಜಿ ಸಚಿವ ಹಾಗೂ ಶತಾಯುಷಿಗಳಾದ ಡಾ. ಭೀಮಣ್ಣ ಖಂಡ್ರೆ, ಇವರ ಪುತ್ರ ಸಚಿವ ಈಶ್ವರ್‌ ಖಂಡ್ರೆ ಹಾಗೂ ಕಾಂಗ್ರೆಸ್‌‍ ಅಭ್ಯರ್ಥಿ ಸಾಗರ್‌ ಖಂಡ್ರೆ ಬೀದರ್‌ ಜಿಲ್ಲೆಯ ಭಾಲ್ಕಿ ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿ ಮತಚಲಾಯಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರು ಕುಟುಂಬ ಸಮೇತರಾಗಿ ಆಗಮಿಸಿ ಹುಬ್ಬಳ್ಳಿಯ ಲ್ಯಾಮಿಂಗ್‌ಟನ್‌ ರಸ್ತೆಯಲ್ಲಿನ ಮತಗಟ್ಟೆ ಸಂಖ್ಯೆ 119ರಲ್ಲಿ ಮತಚಲಾಯಿಸಿದರು.ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌‍ ಅಭ್ಯರ್ಥಿ ವಿನೋದ್‌ ಅಸೂಟಿ ಅವರು ನವಲಗುಂದದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ4ರಲ್ಲಿ ತಮ್ಮ ಮತ ಚಲಾಯಿಸಿದರು.

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಅವರು ತಮ್ಮ ಕುಟುಂಬ ಸಮೇತ ಆಗಮಿಸಿ ಪದಲತಾ ಎಚ್‌ಪಿಎಸ್‌‍ ಮತಗಟ್ಟೆ ಸಂಖ್ಯೆ 50ರಲ್ಲಿ ತಮ ಮತಚಲಾಯಿಸಿದರು.ಅಬಕಾರಿ ಸಚಿವ ಆರ್‌.ಬಿ. ತಿಮಾಪುರ್‌ ಮುದೋಳ ನಗರದ ಮತಗಟ್ಟೆ ಸಂಖ್ಯೆ 113ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.

ಶಿವಮೊಗ್ಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌‍. ಈಶ್ವರಪ್ಪ, ವಿಜಯಪುರದಲ್ಲಿ ಮಾಜಿ ಸಚಿವ ಬಸವನಗೌಡ ಪಾಟೀಲ್‌ ಯತ್ನಾಳ್‌, ಉತ್ತರ ಕನ್ನಡದಲ್ಲಿ ಮಾಜಿ ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಮತದಾನ ಮಾಡಿದರು.

RELATED ARTICLES

Latest News