ಬೆಂಗಳೂರು,ಮಾ.12- ಲೋಕಸಭೆ ಚುನಾವಣೆ ಕ್ಷೇತ್ರ ಹಂಚಿಕೆ ಅಂತಿಮಗೊಳಿಸುವ ಸಂಬಂಧ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳಲಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ಈಗಾಗಲೇ ಸಮ್ಮತಿಸಿದೆ. ಅಲ್ಲದೆ ಮತ್ತೊಂದು ಕ್ಷೇತ್ರ ನೀಡುವ ಭರವಸೆಯನ್ನು ನೀಡಲಾಗಿದೆ.
ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿಸಿಕೊಂಡಿವೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆಯನ್ನು ಕುಮಾರಸ್ವಾಮಿ ಅವರು ನಡೆಸಿದ ನಂತರ ಕ್ಷೇತ್ರ ಹಂಚಿಕೆ ಅಂತಿಮಗೊಳ್ಳಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಜಂಟಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವ ಬಗ್ಗೆಯೂ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡುವುದು ಬಹುತೇಕ ಖಚಿತವಾಗಿದೆ.
ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಯಾವುದಾದರೂ ಮತ್ತೊಂದು ಕ್ಷೇತ್ರವನ್ನು ಕೊಡುವ ಭರವಸೆಯನ್ನು ಬಿಜೆಪಿ ನಾಯಕರು ಜೆಡಿಎಸ್‍ಗೆ ನೀಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರು ಕ್ಷೇತ್ರವಾರು ಸರಣಿ ಸಭೆಗಳನ್ನು ನಡೆಸುವ ಮೂಲಕ ಲೋಕಸಭೆ ಚುನಾವಣೆ ಸಿದ್ದತೆ ಹಾಗೂ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಘೋಷಣೆ ಮಾಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಮಂಡ್ಯ ಕ್ಷೇತ್ರದಿಂದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹೆಸರು ಮುಂಚೂಣಿಯಲ್ಲಿದೆ. ಕೊನೆ ಗಳಿಗೆಯಲ್ಲಿ ಪುಟ್ಟರಾಜು ಅವರು ಅಭ್ಯರ್ಥಿಯಾಗಿ ಸ್ರ್ಪಧಿಸುತ್ತಾರೆಯೋ ಇಲ್ಲವೇ ಬಿಜೆಪಿ ನಾಯಕರ ಸಲಹೆಯಂತೆ ಕುಮಾರಸ್ವಾಮಿ ಅವರೇ ಸ್ಪರ್ಧಿಸುತ್ತಾರೆಯೋ ಕಾದುನೋಡಬೇಕಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿ ಚಿಹ್ನೆಯಡಿ ಸ್ಪರ್ಧೆಗಿಳಿಯುವುದು ಖಚಿತವಾಗಿದೆ.ಕೋಲಾರ ಕ್ಷೇತ್ರದಿಂದ ಶಾಸಕ ಸಮೃದ್ಧಿ ಮಂಜುನಾಥ್ ಇಲ್ಲವೇ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಸ್ಪರ್ಧೆಗಿಳಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.